ಕೃಷಿ ಕಾಯಿದೆ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಲಿತ ಯುವತಿಯನ್ನು ವಿವಾಹವಾಗುವ ಮೂಲಕ ಜಾತಿಪದ್ಧತಿ ನಿರ್ಮೂಲನೆಗೆ ತಾವೇ ಚಾಲನೆ ನೀಡಬೇಕು ಎಂದು ಬಿಜೆಪಿ ಕೇಂದ್ರ ಸಚಿವ ರಾಮದಾಸ್ ಅಟವಳೇ ಸಲಹೆ ನೀಡಿದ್ದಾರೆ.

ಹಮ್ ದೋ ಹಮಾರೇ ದೋ ಘೋಷಣೆ ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿರುವ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಅಟವಳೇ, ರಾಹುಲ್ ಗಾಂಧಿ ಕುಟುಂಬ ಯೋಜನೆ ಬಗ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ ಒಂದೊಮ್ಮೆ ರಾಹುಲ್ ಗಾಂಧಿಯವರಿಗೆ ಮದುವೆಯಾಗೋ ಯೋಚನೆ ಇದ್ದರೇ ಅವರು ದಲಿತ ಯುವತಿಯನ್ನೇ ಮದುವೆಯಾಗಬೇಕು. ಆ ಮೂಲಕ ಜಾತಿ ಪದ್ಧತಿ ನಿರ್ಮೂಲನೆ ತಾವೇ ತಮ್ಮಿಂದಲೇ ಆರಂಭಿಸಬೇಕು ಎಂದಿದ್ದಾರೆ.

ಅಷ್ಟೇ ಅಲ್ಲ ರಾಹುಲ್ ಗಾಂಧಿ ದಲಿತ ಯುವತಿಯನ್ನು ಮದುವೆಯಾದರೇ, ಗಾಂಧೀಜಿಯವರ ಕನಸನ್ನು ಈಡೇರಿಸಿದಂತಾಗುತ್ತದೆ. ಹೀಗಾಗಿ ದಲಿತ ಯುವತಿಯನ್ನೇ ಮದುವೆಯಾಗಬೇಕು. ಹೀಗೆ ಮದುವೆಯಾದರೇ ರಾಹುಲ್ ಗಾಂಧಿಯವರಿಗೆ ಕೇಂದ್ರದಿಂದ 2.5 ಲಕ್ಷ ರೂಪಾಯಿ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದಿದ್ದಾರೆ.

ವಿವಾದಿತ ಕೃಷಿ ಕಾನೂನಿನ ಕುರಿತು ಸದನದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಈ ಕಾನೂನಿನಿಂದ ಮಂಡಿ ವ್ಯವಸ್ಥೆ ಕೊನೆಯಾಗಲಿದೆ. ಅಲ್ಲದೇ ಹಮ್ ದೋ ಹಮಾರೆ ದೋ ಎಂಬಂತೆ ಈ ವ್ಯವಸ್ಥೆಯಿಂದ ನಾಲ್ವರಿಗೆ ಲಾಭವಾಗಲಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ರಾಮದಾಸ್ ಅಟವಳೇ ರಾಹುಲ್ ಗಾಂಧಿ ವೈಯಕ್ತಿಕ ವಿಚಾರದ ಬಗ್ಗೆ ಟೀಕಿಸಿದ್ದಾರೆ.

ಈ ಹಿಂದೆ ಕೊರೋನಾ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಮದಾಸ್ ಅಟವಳೇ ಸುದ್ದಿಯಾಗಿದ್ದರು.