ಬೆಂಗಳೂರು: ರಾಸಲೀಲೆ ಸಿಡಿ ಬಯಲಾದ ಬೆನ್ನಲ್ಲೇ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಮಹಿಳೆಯೋರ್ವರಿಗೆ ವಂಚಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಸಲೀಲೆ ನಡೆಸಿದ್ದಾರೆನ್ನುವ ಆರೋಪ ಕೇಳಿಬಂದಿತ್ತು. ರಾಸಲೀಲೆಯ ಸಿಡಿ ಬಯಲಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೇ ಎದ್ದಿತ್ತು. ರಾಜ್ಯದಾದ್ಯಂತ ರಾಜೀನಾಮೆಗೆ ಆಗ್ರಹ ಕೇಳಿಬರುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಸಮ್ಮತಿಸಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.
ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ತ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ದೂರು ಕೊಡಲಾಗಿತ್ತು. ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಅವರು ನಿನ್ನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದರು.

ಪಕ್ಷಕ್ಕೆ ಮುಜುಗರ ತಪ್ಪಿಸುವ ಸಲುವಾಗಿ ರಾಜೀನಾಮೆಯನ್ನು ಸಲ್ಲಿಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಆರೋಪ ಮುಕ್ತರಾದ ನಂತರ ಅಧಿಕಾರ ಸ್ಚೀಕಾರ ಮಾಡುವುದಾಗಿಯೂ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.