ಬೆಳಗಾವಿ : ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಿಡಿಯಲ್ಲಿದ್ದ ಯುವತಿಯನ್ನು ಅಪಹಣರಣ ಮಾಡಲಾಗಿದೆ ಎಂದು ಯುವತಿಯ ತಂದೆ ದೂರು ನೀಡಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರ್ಚ್ 2ರಿಂದ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ನನ್ನ ಮಗಳನ್ನು ಅಪಹರಿಸಿ ಅಶ್ಲೀಲ ಚಿತ್ರವನ್ನು ಚಿತ್ರಿಸಲಾಗಿದೆ. ಅಲ್ಲದೇ ಮಗಳನ್ನು ಅಪಹರಿಸಿ ಬೆದರಿಕೆಯನ್ನು ಒಡ್ಡಲಾಗುತ್ತಿದೆ. ನನ್ನ ಮಗಳು ಅಪಾಯದಲ್ಲಿದ್ದಾಳೆ. ಹೀಗಾಗಿ ಆಕೆಯನ್ನು ಹುಡುಕಿಕೊಡಿ. ನಮಗೆ ರಕ್ಷಣೆಯನ್ನು ನೀಡಿ ಎಂದು ಯುವತಿಯ ತಂದೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ 7 ದಿನಗಳಿಂದಲೂ ಮಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ವಿಡಿಯೋ ಬಿಡುಗಡೆಯಾದ ದಿನ ಮಾತನಾಡಿದ್ದಳು. ವಿಡಿಯೋದಲ್ಲಿರೋದು ನಾನಲ್ಲ. ನಾನು ಬಂದ ನಂತರದಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದ್ದಳು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಒಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಸ್ ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಇನ್ನೊಂದೆಡೆ ಯುವತಿ ವಿಡಿಯೋ ಹರಿಬಿಟ್ಟು ರಮೇಶ್ ಜಾರಕಿಹೊಳಿ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಳು. ಇದೀಗ ಯುವತಿಯ ತಂದೆ ದೂರು ನೀಡಿರೋದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.