ಸಿನಿಮಾಗಾಗಿ ವರ್ಕೌಟ್ ಮಾಡೋದು ವೇಟ್ ಜಾಸ್ತಿ,ಕಡಿಮೆ ಮಾಡಿಕೊಳ್ಳೋದು ಕಾಮನ್. ಆದರೆ ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಮಾತ್ರ ಸಿನಿಮಾಗಾಗಿ ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಇದೇನು ಹೊಸ ಸಾಹಸ ಅಂದ್ರಾ ರಶ್ಮಿಕಾ ಮಂದಣ್ಣ ಶಾಲೆ ಮೆಟ್ಟಿಲು ಹತ್ತಿರೋದು ಭಾಷೆ ಕಲಿಯೋದಿಕ್ಕೆ.

ಹೌದು ಅಲ್ಲು ಅರ್ಜುನ್ ಜೊತೆ ಹೊಸ ಚಿತ್ರ ಪುಷ್ಪದಲ್ಲಿ ನಟಿಸಲು ಸೈ ಎಂದಿರೋ ರಶ್ಮಿಕಾ ಮಂದಣ್ಣ ಚಿತ್ರಕ್ಕಾಗಿ ಗ್ರಾಮೀಣ ಸೊಗಡಿನ ತೆಲುಗು ಭಾಷೆ ಕಲಿಯಬೇಕಿದೆ. ಆಂಧ್ರದ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸಿನಿಮಾ ಚಿತ್ರೀಕರಣವಾಗಲಿರೋದರಿಂದ ಈಚಿತ್ರಕ್ಕಾಗಿ ತುಸು ಕ್ಲಿಷ್ಟಕರವಾಗಿರೋ ಗ್ರಾಮೀಣ ತೆಲುಗು ಕಲಿಯುವಂತೆ ನಿರ್ದೇಶಕ ಸುಕುಮಾರ್ ಹೇಳಿದ್ದಾರಂತೆ.

ಹೀಗಾಗಿ ರಶ್ಮಿಕಾ ಮಂದಣ್ಣ ಶೃದ್ಧೆಯಿಂದ ಗ್ರಾಮೀಣ ತೆಲುಗು ಕಲಿಕೆಯಲ್ಲಿ ನಿರತರಾಗಿದ್ದಾರೆ. ಆರ್ಯ ಬಳಿಕ ಮತ್ತೊಮ್ಮೆ ಪುಷ್ಪ ಚಿತ್ರಕ್ಕಾಗಿ ಸುಕುಮಾರ್ ಮತ್ತು ಅಲ್ಲೂ ಅರ್ಜುನ್ ಒಂದಾಗಿದ್ದು, ನವೆಂಬರ್ 6 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದಲ್ಲಿ ಕನ್ನಡಿಗ ಡಾಲಿ ಧನಂಜಯ್ ಖಡಕ್ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರಂತೆ.

ಸಧ್ಯ ತೆಲುಗಿನ ಚಿತ್ರಗಳಲ್ಲೇ ಹೆಚ್ಚು ಖ್ಯಾತಿ ಗಳಿಸುತ್ತ ಅಲ್ಲೇ ನೆಲೆಕಂಡುಕೊಳ್ಳುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಸಧ್ಯದಲ್ಲೇ ತಮ್ಮ ಭಾಷಾ ಕಲಿಕೆ ಮುಗಿಸಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರಂತೆ. ಲಾಕ್ ಡೌನ್ ಗೂ ಮುನ್ನ ಚಿತ್ರದ ಕೆಲ ಭಾಗವನ್ನು ಕೇರಳದಲ್ಲಿ ಚಿತ್ರಿಸಲಾಗಿತ್ತು.

ಈಗ ಪುಷ್ಪ ಚಿತ್ರಕ್ಕಾಗಿ ಆಂಧ್ರಪ್ರದೇಶದ ಚಿತ್ತೂರು, ತಿರುಪತಿ,ವಿಶಾಖಪಟ್ಟಣಂನಲ್ಲಿ ಶೂಟಿಂಗ್ ನಡೆಯಲಿದ್ದು, ಚಿತ್ರತಂಡ ಕೊರೋನಾ ನಿಯಮಾವಳಿಗಳ ಜೊತೆ ಶೂಟಿಂಗ್ ಗೆ ಸಿದ್ಧತೆ ನಡೆಸಿದೆ. ಇನ್ನು ಕಿರಿಕ್ ಬೆಡಗಿ ಗ್ರಾಮೀಣ ತೆಲುಗಿನಲ್ಲಿ ಅಣಿಮುತ್ತುಗಳನ್ನು ಹೇಗೆ ಉದುರಿಸುತ್ತಾರೆ ಎಂಬುದನ್ನು ನೋಡೋಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.