ಕೋಟ : ಸಾಯಿಬ್ರಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಯಿಬ್ರಕಟ್ಟೆ ಆಸ್ಪತ್ರೆಯನ್ನು ಕೋಟ ಕಂದಾಯ ನಿರೀಕ್ಷರಾದ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಆರೋಗ್ಯಾಧಿಕಾರಿಗಳಿಗೆ ಜ್ವರ ಕಾಣಿಸಿಕೊಂಡಿತ್ತು. ಶಂಕಿತ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಕೊರೊನಾ ತಪಾಸಣಾ ವರದಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ.

ಆರೋಗ್ಯಾಧಿಕಾರಿಗಳು ವಾಸವಾಗಿದ್ದ ಸಾಯಿಬ್ರಕಟ್ಟೆಯಲ್ಲಿರುವ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಆರೋಗ್ಯಾಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಇನ್ನು ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾವಡಿ ಹವರಾಲುವಿನ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ತಪಾಸಣೆಗೆ ಒಳಗಾಗಿದ್ದ ವ್ಯಕ್ತಿ ಹಲರಾಲುವಿನಲ್ಲಿರುವ ಮನೆಗೆ ಬಂದಿದ್ದರು. ಮನೆಗೆ ಬಂದ ನಂತರದಲ್ಲಿ ಕೊರೊನಾ ತಪಾಸಣಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.