ಇನ್ನೇನು ಮೂರು ದಿನದಲ್ಲಿ ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬವಿದೆ. ಆದರೆ ಕೊರೋನಾ ಸಂಕಷ್ಟ ಹಾಗೂ ಹಲವು ಆತ್ಮೀಯರ ಅಗಲುವಿಕೆಯಿಂದ ನೊಂದ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದು, ನೋವಿನ ನಡುವೆ ಸಂಭ್ರಮ ಬೇಡ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ ಹುಟ್ಟುಹಬ್ಬವಿದೆ. ಪ್ರತಿವರ್ಷವೂ ಗಣೇಶ್ ಮನೆಗೆ ಬರುತ್ತಿದ್ದ ಸಾವಿರಾರು ಅಭಿಮಾನಿಗಳು ಕೇಕ್ ಕತ್ತರಿಸಿ, ಶುಭಹಾರೈಸಿ ಸಂಭ್ರಮಿಸುತ್ತಿದ್ದರು. ಆದರೆ ಈ ಭಾರಿ ಕೊರೋನಾ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಗಣೇಶ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿರುವ ಗಣೇಶ್, ಕೊರೋನಾದಿಂದ ಜನರು ಸಂಕಷ್ಟದಲ್ಲಿದ್ದಾರೆ. ಹಲವು ಆತ್ಮೀಯರು ಅಗಲಿದ್ದಾರೆ. ಇಂಥ ಹೊತ್ತಿನಲ್ಲಿ ಜನ್ಮದಿನಾಚರಣೆ ಸೂಕ್ತವಲ್ಲ ಎಂದು ಭಾವಿಸಿದ್ದೇನೆ. ಅಲ್ಲದೇ ಹುಟ್ಟುಹಬ್ಬದ ವೇಳೆಗೆ ನಾನು ಹೊರಾಂಗಣ ಚಿತ್ರೀಕರಣದಲ್ಲಿರುತ್ತೇನೆ.

ಹೀಗಾಗಿ ನೀವೆಲ್ಲರೂ ಕೇಕ್ ಸೇರಿದಂತೆ ಹುಟ್ಟುಹಬ್ಬಕ್ಕೆ ದುಡ್ಡು ವೆಚ್ಚ ಮಾಡದೇ ಆ ಹಣವನ್ನು ಕೊರೋನಾ ಸಂಕಷ್ಟದಲ್ಲಿರುವವರಿಗೆ ನೀಡಿ ನೆರವಾಗಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಸುರಕ್ಷಿತವಾಗಿರಿ ಎಂದು ಗಣೇಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸುಧೀರ್ಘವಾದ ಪತ್ರ ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಗಣೇಶ್, ಕೊರೋನಾ ಕಾಲದಲ್ಲಿ ನನ್ನ ಹೆಸರಲ್ಲಿ ಬೇರೆಯವರಿಗೆ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್, ಗಾಳಿಪಟ-2 ಹಾಗೂ ಸಖತ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಮೂರು ಸಿನಿಮಾಗಳು ಬಹುತೇಕ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಯಾವ ಚಿತ್ರ ಮೊದಲು ತೆರೆಗೆ ಬರಲಿದೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡ್ತಿದೆ.