ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಸೋಮವಾರ ಹುಟ್ಟುಹಬ್ಬವಿದ್ದರೂ ಕೊರೋನಾದಿಂದ ಅದ್ದೂರಿ ಆಚರಣೆಗೆ ಶಿವಣ್ಣ ಬ್ರೇಕ್ ಹಾಕಿದ್ದಾರೆ. ಆದರೆ ಈ ಹುಟ್ಟುಹಬ್ಬವನ್ನು ಸೆಶ್ಪಲ್ ಆಗಿ ಸೆಲಿಬ್ರೇಟ್ ಮಾಡಲು ಭಜರಂಗಿ 2 ಚಿತ್ರತಂಡ ನಿರ್ಧರಿಸಿದೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ -2 ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ವಿಶಿಷ್ಟವಾದ ಪೋಸ್ಟರ್ ಹಾಗೂ ಪೋಟೋಗಳಿಂದ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

ಶಿವಣ್ಣನಿಗೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಎ.ಹರ್ಷ ಭಜರಂಗಿ-2 ನಿರ್ದೇಶಿಸಿದ್ದು, ಶಿವಣ್ಣನಿಗೆ ನಾಯಕಿಯಾಗಿ ಭಾವನಾ, ಸಹನಟರಾಗಿ ಶಿವರಾಜ ಕೆ.ಆರ್.ಪೇಟೆ, ಸೌರವ್ ಲೋಕೇಶ್, ಶೃತಿ, ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಚಿತ್ರದ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಉತ್ತರ ಪ್ರಕ್ರಿಯೆ ಪಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನು ಈ ವರ್ಷ ಕೊರೋನಾ ಸಂಕಷ್ಟದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಶಿವಣ್ಣ ನಿರ್ಧರಿಸಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನನಗೆ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ. ಹುಟ್ಟುಹಬ್ಬ ಆಚರಿಸಲು ಯಾರು ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಭಜರಂಗಿ -2 ಬೆನ್ನಲ್ಲೇ ಶಿವಣ್ಣ ಹಾಗೂ ಹರ್ಷ ಜೋಡಿಯಾಗಿರುವ ಮುಂದಿನ ಚಿತ್ರ ವೇದ ಘೋಷಣೆಯಾಗಿದ್ದು, ಶಿವಣ್ಣನ ಈ 125 ನೇ ಸಿನಿಮಾಕ್ಕೆ ಗೀತಾ ಶಿವರಾಜ್ ಕುಮಾರ್ ಬಂಡವಾಳ ಹೂಡಲಿದ್ದಾರೆ.