ಕೊರೋನಾ ಬಳಿಕ ತೆರೆಗೆ ಬರುತ್ತಿರುವ ಧ್ರುವ್ ಸರ್ಜಾ ಅಭಿನಯದ ಬಹುನೀರಿಕ್ಷಿತ ಚಿತ್ರ ಪೊಗರು. ಇನ್ನೇನು ಸಿನಿಮಾ ಬಿಡುಗಡೆಗೆ ದಿನಗಣನೆ ನಡೆದಿರುವಾಗಲೇ ಪೊಗರು ಅಂಗಳದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹೌದು ಪೊಗರು ಸಿನಿಮಾದ ಇಂಟರ್ವೆಲ್ ನಲ್ಲಿ ಪ್ರೇಕ್ಷಕರಿಗೆ ಚಿರು ದರ್ಶನವಾಗಲಿದೆ.

ನಿರ್ದೇಶಕ ನಂದಕಿಶೋರ್ ಆಕ್ಷ್ಯನ್ ಕಟ್ ಹೇಳಿರುವ ಪೊಗರು ಸಿನಿಮಾಗಾಗಿ ಧ್ರುವ್ ಸರ್ಜಾ ಮೂರೂವರೆ ವರ್ಷಗಳ ಕಾಲ ಶ್ರಮಿಸಿದ್ದು, ಎರಡೆರಡು ಭಾರಿ ಗೆಟಪ್ ಬದಲಾಯಿಸಿಕೊಂಡಿದ್ದಾರೆ. ಈ ಚಿತ್ರ ಸಾಕಷ್ಟು ನೀರಿಕ್ಷೆ ಮೂಡಿಸಿದ್ದು, ರಥಸಪ್ತಮಿಯಂದು ತೆಲುಗು-ತಮಿಳು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

ಈ ಮಧ್ಯೆ ಪೊಗರು ಸಿನಿಮಾ ರಿಲೀಸ್ ಹಾಗೂ ಪ್ರದರ್ಶನದ ವೇಳೆ ಇಂಟರ್ವೆಲ್ ನಲ್ಲಿ ದಿ.ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಾಮಾರ್ತಾಂಡ್ ಸಿನಿಮಾದ ಟ್ರೇಲರ್ ಪ್ರದರ್ಶಿಸಲು ನಿರ್ಧರಿಸಿದ್ದಾರೆ.

ರಾಜಾಮಾರ್ತಾಂಡ್ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಚಿತ್ರವಾಗಿದ್ದು, ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳ್ಳುವ ಮುನ್ನ ಚಿರು ನಿಧನರಾಗಿದ್ದರು.

ಹೀಗಾಗಿ ಈ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಅಣ್ಣನ ಪಾತ್ರಗಳಿಗೆ ಜೀವ ತುಂಬುವ ಕೆಲಸವನ್ನು ನಟ ಧ್ರುವ್ ಸರ್ಜಾ ಮಾಡಿದ್ದರು. ಈಗ ತಮ್ಮ ಬಹುನೀರಿಕ್ಷಿತ ಚಿತ್ರ ಪೊಗರು ಮಧ್ಯೆ ಅಣ್ಣನ ಸಿನಿಮಾದ ಟ್ರೇಲರ್ ಪ್ರದರ್ಶನಕ್ಕೆ ನಿರ್ಧರಿಸಿದ್ದಾರೆ.

ಅಣ್ಣನ ನಿಧನದ ಬಳಿಕ ಅಣ್ಣನ ಸಿನಿಮಾಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದ ಧ್ರುವ್ ಸರ್ಜಾ ಈಗ ತಮಗೆ ಅಣ್ಣನ ಜೊತೆ ಇರೋ ಭಾವನಾತ್ಮಕ ಬಂಧವನ್ನು ನಿರೂಪಿಸೋದಿಕ್ಕೆ ತಮ್ಮ ಸಿನಿಮಾ ದ ಜೊತೆ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಇದು ಧ್ರುವ್ ಹಾಗೂ ಚಿರು ಸರ್ಜಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.