ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಲೂಸ್ ಮಾದ ಹಾಗೂ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಆಂತರಿಕ ಭದ್ರತಾ ಪಡೆಯ ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಐಎಸ್‍ಡಿ (ಆಂತರಿಕ ಭದ್ರತಾ ಪಡೆ) ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್ 12ರಂದು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಐಎಸ್‍ಡಿ ಬೆಂಗಳೂರಿನ ಪೀಣ್ಯ ವ್ಯಾಪ್ತಿಯ ಅಂದರಹಳ್ಳಿ ಬಳಿ ಇಬ್ಬರು ಡ್ರಗ್ ಪೆಡ್ಲರ್ ಗಳಾದ ಕೇರಳ ಮೂಲದ ಗೋಕುಲ್ ಕೃಷ್ಣ ಹಾಗೂ ರಾನ್ ಡ್ಯಾನಿಯಲ್ ಎಂಬವರನ್ನು ಬಂಧಿಸಲಾಗಿತ್ತು.

ಡ್ರಗ್ಸ್ ಪೆಡ್ಲರ್ ಗಳು ನೀಡಿ ಮಾಹಿತಿಯ ಆಧಾರದ ಮೇಲೆ ನಟ ಲೂಸ್ ಮಾದ ಖ್ಯಾತಿಯ ಯೋಗಿ, ಕ್ರಿಕೆಟಿಗ ಅಯ್ಯಪ್ಪ, ಕಿರುತೆರೆ ನಟಿ ರಶ್ಮಿ ಚಂಗಪ್ಪ ಹಾಗೂ ಖಾಸಗಿ ವಾಹಿನಿಯ ಸಿಬ್ಬಂದಿ ನಿಶ್ಚಿತ ಶರತ್ ಎಂಬವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಯ ವೇಳೆಯಲ್ಲಿ ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎಂದಿದ್ದಾರೆ.

ಇನ್ನು ಡ್ರಗ್ಸ್ ಪೆಡ್ಲರ್ ಗಳ ಬಳಿಯಲ್ಲಿ ಗಾಂಜಾ, ಎಲ್‍ಎಸ್‍ಡಿ ಮಾತ್ರೆಗಳು ಪತ್ತೆಯಾಗಿದ್ದು, ಪೆಡ್ಲರ್ ಗಳು ಕೆಲವು ಗಣ್ಯರ ಮಕ್ಕಳಿಗೆ ಡ್ರಗ್ಸ್ ಸಪ್ಲೈ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನೋಟೀಸ್ ನೀಡಿ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಮಾಹಿತಿಯನ್ನು ಈಗಾಗಲೇ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.