ಚಿರು ಕಳೆದುಕೊಂಡ ದುಃಖದಲ್ಲಿ ಜ್ಯೂನಿಯರ್ ಚಿರುವನ್ನು ಮಡಿಲಲ್ಲಿ ಇಟ್ಟುಕೊಂಡು ಬದುಕನ್ನು ಜೋಡಿಸುತ್ತಿರುವ ನಟಿ ಮೇಘನಾರಾಜ್ ಸರ್ಜಾ ಇಂದು ತವರಿನ ತೊಟ್ಟಿಲು ಶಾಸ್ತ್ರದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದು, ಚಿರು ಕಂದನನ್ನು ಚಿರು ಕನಸಿನಂತೆ ಬೆಳೆಸುತ್ತೇನೆ ಎನ್ನುತ್ತ ಚಿರು ನೆನೆದು ಭಾವುಕರಾಗಿದ್ದಾರೆ.

ನನ್ನ ಬದುಕಿನಲ್ಲಿ ನಡೆದ ಘಟನೆಗಳಿಂದ ನಾನು ಬ್ಲ್ಯಾಂಕ್ ಆಗಿದ್ದೆ. ಈಗಲೂ ಹಾಗೇಯೇ ಇದ್ದೇನೆ. ಆದರೆ ಈಗ ನನ್ನ ಮುಂದಿನ ಬದುಕು ನನ್ನ ಮಗ ನನ್ನ ಮುಂದಿದ್ದಾನೆ. ಆತನೇ ನನ್ನ ಸರ್ವಸ್ವ. ಅವನಿಗಾಗಿಯೇ ನನ್ನ ಬದುಕು ಮೀಸಲು ಎಂದಿದ್ದಾರೆ.

ಚಿರು ಕನಸಿನಂತೆ ಮಗನನ್ನು ಬೆಳೆಸುತ್ತೇನೆ. ಅವರ ಕನಸಿನಂತೆ ಅವರ ಮಗನನ್ನು ಬೆಳೆಸಿದಾಗ ಮಾತ್ರ ಅವರ ಕನಸುಗಳಿಗೆ ನಾನು ಜೀವತುಂಬಿದಂತಾಗುತ್ತದೆ ಎಂದಿದ್ದಾರೆ.

ಸಧ್ಯ ನನ್ನ ಇಡಿ ದಿನ ರಾತ್ರಿ ಬೆಳಗು ಮಗನ ಜೊತೆಗೆ ನಡೆಯುತ್ತಿದೆ. ಅವನು ಕ್ಲಾಕ್ ನಂತೆ ನನ್ನ ದಿನಚರಿ ಆರಂಭವಾಗಿದೆ. ಮಗುವಿನ ಜೊತೆ ಸಮಯ ಕಳೆಯುತ್ತಿದ್ದೇನೆ. ಮಗನನ್ನು ನೋಡಿದಾಗಲೆಲ್ಲ ಚಿರು ನನ್ನೊಂದಿಗೆ ಇದ್ದಾರೆ ಎನ್ನಿಸುತ್ತದೆ ಎಂದು ಮೇಘನಾ ಕಣ್ಣಿರಾಗಿದ್ದಾರೆ.

ನನ್ನ ಬದುಕಿನ ಕಷ್ಟದ ಕ್ಷಣದಲ್ಲಿ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದ ಮೇಘನಾ, ಇಂದು ತವರಿನ ತೊಟ್ಟಿಲ ಶಾಸ್ತ್ರ ನಡೆದಿದೆ. ನಾಮಕರಣ ಮುಂದೇ ನಡೆಯಲಿದ್ದು, ಜಾತಕದಂತೆ ಒಂದು ಅಕ್ಷರ ನೀಡಿದ್ದಾರೆ. ಹೆಸರು ಹುಡುಕುತ್ತಿದ್ದೇವೆ. ಚಿರು ಮಗನ ಹೆಸರಲ್ವಾ….ಸೋ ತುಂಬಾ ಸುಂದರವಾಗಿ ಭಿನ್ನವಾಗಿ ಇರಬೇಕು. ಅದಕ್ಕೆ ಇನ್ನು ಹುಡುಕುತ್ತಿದ್ದೇವೆ.ನಾಮಕರಣದ ವೇಳೆ ರಿವೀಲ್ ಮಾಡ್ತೇವೆ ಎಂದರು.

ಕಲಘಟಗಿಯಿಂದ ಗಿಫ್ಟ್ ಆಗಿ ತೊಟ್ಟಿಲು ಬಂದಿದ್ದು ಅದನ್ನು ಪ್ರೀತಿಯಿಂದ ಸ್ವೀಕರಿಸಿದ್ದೇವೆ.ಅವರೆಲ್ಲರ ಪ್ರೀತಿಗೆ ನಾನು ಚಿರ ಋಣಿ ಎಂದು ಮೇಘನಾ ತಮ್ಮ ಮನದಾಳದ ಭಾವನೆಗಳನ್ನು ಬಿಚ್ಚಿಟ್ಟಿದ್ದಾರೆ.