ಮಾಜಿ ಮೇಯರ್ ಸಂಪತ್ ರಾಜ್ ಗೆ ಸಂಕಷ್ಟ….! ಜಾಮೀನು ರಹಿತ ಬಂಧನ ವಾರೆಂಟ್ ಜಾರಿ…!!

ಬೆಂಗಳೂರು: ನಗರದ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ  ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ನಾಯಕ ಸಂಪತ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದೆ.

ಕೆಲ ದಿನಗಳ ಹಿಂದೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಸಂಪತ್ ರಾಜ್ ಗೆ ನೊಟೀಸ್ ಜಾರಿ ಮಾಡಲಾಗಿತ್ತು. ಆದರೆ ಅನಾರೋಗ್ಯದ ನೆಪ ಹೂಡಿದ್ದ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸಂಪತ್ ರಾಜ್ ಸಿಸಿಬಿ ಕಣ್ಣುತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಇದೀಗ ಸಂಪತ್ ರಾಜ್ ಬಂಧನಕ್ಕೆ ಬಲೆ ಬೀಸಿರುವ ಸಿಸಿಬಿ ಜಾಮೀನು ರಹಿತ ಅರೇಸ್ಟ್ ವಾರೆಂಟ್ ಜಾರಿ ಮಾಡಿದೆ. ಸಂಪತ್ ರಾಜ್ ಬಂಧನದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ವಾರೆಂಟ್ ಜಾರಿ ಮಾಡಿರುವ ಸಿಸಿಬಿ ಹುಡುಕಾಟ ಮುಂದುವರೆಸಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಪತ್ ರಾಜ್ ವಿಚಾರದಲ್ಲಿ ನಿನ್ನೆ  ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿದ್ದು, ಕೇಳಿದ್ದೇವೆ. ಸಂಪತ್ ರಾಜ್ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಎಲ್ಲೆ ಇದ್ದರೂ ಸಂಪತ್ ರಾಜ್ ಬಂದು ಪೊಲೀಸರ ಮುಂದೇ ಶರಣಾಗಬೇಕು. ವಿನಾಕಾರಣ ಅವರಿಂದ ಜನರಿಗೆ ತೊಂದರೆಯಾಗಬಾರದು ಎಂದಿದ್ದಾರೆ.

ಡಿಜೆಹಳ್ಳಿ ಹಾಗೂ ಕೆಜಿಹಳ್ಳಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕನ ಮಗ ಹಾಕಿದ ಪೋಸ್ಟ್ ವೊಂದನ್ನು ಕಾರಣವಾಗಿಟ್ಟುಕೊಟ್ಟು ಗಲಾಟೆ ಹಾಗೂ ದೊಂಬಿ ನಡೆದಿದ್ದು, ಹಲವು ಅಮಾಯಕರ ಮನೆ ಹಾಗೂ ವಾಹನಗಳಿಗೆ ಹಾನಿಯಾಗಿತ್ತು. ಅಲ್ಲದೇ ಪೊಲೀಸರು ನಡೆಸಿದ್ದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಮೊದಲು ಮಾಜಿ ಮೇಯರ್ ಸಂಪತ್ ರಾಜು ಆಪ್ತನನ್ನು ವಶಕ್ಕೆ ಪಡೆದಿದ್ದರು. ಆತನ ವಿಚಾರಣೆ ವೇಳೆ ಈ ಪ್ರಕರಣದಲ್ಲಿ ಸಂಪತ್ ರಾಜು ಕೈವಾಡವಿರೋದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಸಂಪತ್ ರಾಜುಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೊಟೀಸ್ ಜಾರಿ ಮಾಡಿತ್ತು.

Comments are closed.