ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಟ,ಮಾಜಿಸಿಎಂ ಪುತ್ರ ಹಾಗೂ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಕೊರೋನಾ ಸೋಂಕಿನ ಸಮಸ್ಯೆಗಳಾದ ತಲೆನೋವು,ವಾಂತಿ ಹಾಗೂ ಜ್ವರ ಉಲ್ಬಣಿಸಿದ್ದರಿಂದ ವೈದ್ಯರ ಸಲಹೆ ಮೇರೆಗೆ ನಿಖಿಲ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. 10 ದಿನಗಳ ಕಾಲ ನಿಖಿಲ್ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚಿಗಷ್ಟೇ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ರೈಡರ್ ಚಿತ್ರದ ಶೂಟಿಂಗ್ ಗಾಗಿ ಲೇಲಡಾಕ್ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿಂದ ಶೂಟಿಂಗ್ ಮುಗಿಸಿ ವಾಪಸ್ಸಾದ ಬಳಿಕ ನಿಖಿಲ್ ಕುಮಾರಸ್ವಾಮಿಗೆ ಕೊರೋನಾ ಸೋಂಕು ತಗುಲಿದ್ದು, ಧೃಡಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ನಿಖಿಲ್ ವೈದ್ಯರ ಮಾರ್ಗದರ್ಶನದಲ್ಲಿ ಔಷಧಿ ಪಡೆಯುತ್ತಿದ್ದರು. ಆದರೆ ಈಗ ಹೆಚ್ಚು ಅಸ್ವಸ್ಥತೆ ಕಾಡಿರೋದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕಳೆದ ಏಪ್ರಿಲ್ 17 ರಂದು ರೇವತಿಯವರೊಂದಿಗೆ ಸಪ್ತಪದಿ ತುಳಿದಿದ್ದ ನಿಖಿಲ್ ಗೆ ಫರ್ಸ್ಟ್ ಆನ್ಯಿವರ್ಸರಿ ದಿನವೇ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೊದಲ ವಾರ್ಷೀಕೋತ್ಸವವನ್ನು ಸೆಲಿಬ್ರೇಟ್ ಮಾಡಲು ಸಾಧ್ಯವಾಗಿರಲಿಲ್ಲ .

ಇದೀಗ ನಿಖಿಲ್ ತಮ್ಮ ತಂದೆ ಹಾಗೂ ಮಾಜಿಸಿಎಂ ಕುಮಾರಸ್ವಾಮಿ ಕೊರೋನಾ ಸೋಂಕಿನಿಂದ ದಾಖಲಾಗಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.