ಕೊರೋನಾ ಸಂಕಷ್ಟದಲ್ಲಿ ಸಿನಿಮಾ ರಿಲೀಸ್ ಮಾಡಿ ಕಂಗೆಟ್ಟಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ತಂಡ ಕೊನೆಗೂ ಅಮೆಜಾನ್ ಎಂಟ್ರಿಕೊಡುವ ನಿರ್ಧಾರಕ್ಕೆ ಬಂದಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಏಪ್ರಿಲ್ 9 ರಿಂದ ಒಟಿಟಿ ಅಮೆಜಾನ್ ಪ್ರೈಂನಲ್ಲಿ ಯುವರತ್ನ ವೀಕ್ಷಣೆಗೆ ಸಿಗಲಿದೆ. ಈ ವಿಚಾರವನ್ನು ಸ್ವತಃ ನಿರ್ದೇಶನ ಸಂತೋಷ್ ಆನಂದ ರಾಮ್ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಇರುವ ಪರಿಸ್ಥಿತಿ ನೋಡಿ ನಾವು ಅಮೆಜಾನ್ ಪ್ರೈಂನಲ್ಲಿ ಚಿತ್ರಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.

ಸಾಮಾಜಿಕ ಜವಾಬ್ದಾರಿ ಹಾಗೂ ಸಿನಿಮಾ ಪ್ರದರ್ಶನ ಎರಡನ್ನೂ ನಿಭಾಯಿಸಬೇಕಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಯಿತು. ಈ ಫ್ಲ್ಯಾಟ್ ಫಾರ್ಮ್ ನಲ್ಲೂ ಯುವರತ್ನಗೆ ಒಳ್ಳೆಯ ರೆಸ್ಪಾನ್ಸ್ ಸಿಗೋ ಭರವಸೆ ಇದೆ. ಚಿತ್ರಮಂದಿರದಲ್ಲೂ ಪ್ರದರ್ಶನ ಮುಂದುವರೆಯಲಿದೆ ಎಂದು ಸಂತೋಷ್ ವಿವರಣೆ ನೀಡಿದ್ದಾರೆ.

ಅಮೆಜಾನ್ ನಲ್ಲಿ ಇದು ತಮ್ಮ ಮೊದಲನೇ ಸಿನಿಮಾ ಎಂಬ ಮಾಹಿತಿ ನೀಡಿರುವ ನಟ ಪುನೀತ್ ರಾಜಕುಮಾರ್. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಸಿನಿಮಾ ಚಿತ್ರೀಕರಣ ಮುಗಿದಿತ್ತು. ತುಂಬ ಯೋಚನೆ ಮಾಡಿ ರಿಲೀಸ್ ಡೇಟ್ ಅನೌನ್ಸ ಮಾಡಿದ್ದೇವು. ರಿಲೀಸ್ ಆದಾಗ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಬದಲಾದ ಪರಿಸ್ಥಿತಿ ನಮಗೆ ಆತಂಕ ತಂದಿತ್ತು. ಆದರೆ ಈಗ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ ನೋಡಿ ಆನಂದಿಸಿ ಎಂದು ಮನವಿ ಮಾಡಿದ್ದಾರೆ.

ಅಮೆಜಾನ್ ನಲ್ಲಿ ಯುವರತ್ನ ಸಿನಿಮಾ ಹಿಂದಿ.ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ಪ್ರಸಾರವಾಗಲಿದೆ. ಒಟ್ಟಿನಲ್ಲಿ ಒಟಿಟಿಯಲ್ಲಿ ಯುವರತ್ನನ ಹವಾ ಆರಂಭವಾಗಿದೆ.