ಸಧ್ಯ ಸಾಲು-ಸಾಲು ಚಿತ್ರದಲ್ಲಿ ಬ್ಯುಸಿಯಾಗಿರೋ ನಟ ಸುದೀಪ್ ಶೂಟಿಂಗ್ ಮಧ್ಯೆ ಚಾಮುಂಡಿ ದರ್ಶನಕ್ಕೆ ತೆರಳಿದ್ದು, ದೇವಾಲಯದಲ್ಲಿ ಅಭಿಮಾನಿಗಳಿಗೆ ಶಾಂತಿಪಾಠ ಮಾಡಿ ಸುದ್ದಿಯಾಗಿದ್ದಾರೆ.

ಬಿಡುವಿಲ್ಲದ ಶೆಡ್ಯೂಲ್ ಮಧ್ಯೆ ಫ್ಯಾಂಟಮ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರೋ ನಟ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿದ ಸುದೀಪ್ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.ಇನ್ನು ಸುದೀಪ್ ದೇವಾಲಯಕ್ಕೆ ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕೊರೋನಾ ಲೆಕ್ಕಿಸದೇ ಸೆಲ್ಪಿಗಾಗಿ ಮುಗಿ ಬಿದ್ದಿದ್ದಾರೆ.

ಇದನ್ನು ಗಮನಿಸಿದ ಕಿಚ್ಚ ಸುದೀಪ್, ಅಭಿಮಾನಿಗಳಿಗೆ ದೇವಾಲಯದಲ್ಲಿ ಗಲಾಟೆಮಾಡದಂತೆ ಹಾಗೂ ಶಾಂತಿ ಕಾಪಾಡುವಂತೆ ತುಟಿ ಮೇಲೆ ಬೆರಳಿಟ್ಟು ಶಾಂತಿ ಪಾಠ ಮಾಡಿದ್ದಾರೆ.ದೇವಾಲಯದಲ್ಲಿ ಪೂಜೆ ಸಲ್ಲಿಸುವಾಗ ಹಾಗೂ ಹೊರಭಾಗದಲ್ಲಿ ಪ್ರದಕ್ಷಿಣೆ ಹಾಕುವಾಗಲೂ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದಿದ್ದಾರೆ.

ಈ ಮಧ್ಯೆ ಅಭಿಮಾನಿಯೊಬ್ಬ ಇನ್ನೊಬ್ಬ ಅಭಿಮಾನಿ ಮಾಸ್ಕ್ ಹಾಕಲಿಲ್ಲ ಎಂದು ಆತನಿಗೆ ದಬಾಯಿಸಿದ ಘಟನೆಯೂ ನಡೆದಿದೆ. ಆದರೆ ದೇವಾಲಯಕ್ಕೆ ತೆರಳಿದ ಸುದೀಪ್ ಕೂಡ ಮಾಸ್ಕ್ ಧರಿಸಿರಲಿಲ್ಲ.

ಸದ್ಯ ಫ್ಯಾಂಟಮ್ ಚಿತ್ರದಲ್ಲಿ ಬ್ಯುಸಿಯಾಗಿರೋ ಸುದೀಪ್, ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಶೋಗೆ ಹಾಜರಾಗಲಿದ್ದು, ಬಳಿಕ ಮತ್ತೆ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ.