ಕೆಜಿಎಫ್-2 ಸ್ಯಾಂಡಲ್ ವುಡ್ ಮಾತ್ರವಲ್ಲ ದೇಶದ ಸಿನಿಮಾರಂಗವೇ ಕಾಯುತ್ತಿರುವ ಸಿನಿಮಾ. ಇದಕ್ಕೆ ಸಾಕ್ಷಿ ಆಯ್.ಎಂ.ಡಿ.ಬಿ ಬಿಡುಗಡೆ ಮಾಡಿರುವ ಬಹುನೀರಿಕ್ಷಿತ ಸಿನಿಮಾಗಳ ಪಟ್ಟಿ. ಈ ಪಟ್ಟಿಯಲ್ಲಿ ಕೆಜಿಎಫ್-2 ಅಗ್ರಸ್ಥಾನ ಕಾಯ್ದುಕೊಂಡಿದ್ದು, ತೆಲುಗಿನ ಪುಷ್ಪ ಕೂಡ ಸ್ಥಾನ ಪಡೆದಿದೆ.

ಆಯ್.ಎಂ.ಡಿ.ಬಿ ದೇಶದ ಬಹುನೀರಿಕ್ಷಿತ ಸಿನಿಮಾಗಳ ಪಟ್ಟಿ ಮಾಡಿದೆ. ಈ ಪಟ್ಟಿಯ ಮೊದಲ ಮೂರು ಸ್ಥಾನದಲ್ಲೂಬೇರೆ ಭಾಷೆಯ ಸಿನಿಮಾಗಳೇ ಮೇಲುಗೈ ಸಾಧಿಸಿದ್ದು, ಬಾಲಿವುಡ್ ಸಿನಿಮಾಗಳ ಸದ್ದಿಲ್ಲ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2, 27.5% ಸ್ಥಾನದೊಂದಿಗೆ ಮೊದಲ ಸ್ಥಾನದಲ್ಲಿದೆ.

ತೆಲುಗಿನಲ್ಲಿ ಗಂಧದ ಕಳ್ಳಸಾಗಾಣಿಕೆ ಕತೆ ಆಧಾರಿಸಿದ ಅಲ್ಲೂಅರ್ಜುನ್, ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ಶೇಕಡಾ 24.3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮೋಹನಲಾಲ್ ನಟನೆಯ ಮರಕ್ಕರ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಪ್ರಭಾಸ್ ಹಾಗೂ ಪೂಜಾ ನಟನೆಯ ರಾಧೆ ಇದೆ. ಅಚ್ಚರಿ ಎಂದರೇ ಕೊನೆಯ ಸ್ಥಾನದಲ್ಲಿ ತಾಪ್ಸಿ ಪನ್ನು ನಟನೆಯ ಹಸೀನ್ ದಿಲ್ ರುಬಾ ಚಿತ್ರವಿದೆ.

ಕೊನೆಯ ಕ್ಷಣದವರೆಗೂ ರಕ್ತಚಂದನದ ಕಳ್ಳ ಸಾಗಾಣಿಕೆ ಕತೆಯ ಪುಷ್ಪಾ ಸಿನಿಮಾ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಜಿಎಫ್-2 ಪುಷ್ಪಾ ಸಿನಿಮಾ ಹಿಂದಿಕ್ಕಿದೆ. ಕೆಜಿಎಫ್-2 ಈಗಾಗಲೇ ಕನ್ನಡಿಗರೂ ಸೇರಿದಂತೆ ಚಿತ್ರರಸಿಕರ ಕುತೂಹಲ ಹೆಚ್ಚಿಸಿದ್ದು, ಟ್ರೇಲರ್, ಟೀಸರ್ ಗಳು ಸಾಕಷ್ಟು ದಾಖಲೆ ಬರೆದಿವೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಕೆಜಿಎಫ್-2 ಜುಲೈ ತಿಂಗಳಿನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಎರಡನೇ ಅಲೆ ಕಾರಣಕ್ಕೆ ಮುಂದೂಡಲ್ಪಟ್ಟಿದ್ದು, ಸಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ ಎನ್ನಲಾಗಿದ್ದರೂ ಇನ್ನ ಖಚಿತವಾಗಿಲ್ಲ.

ಇನ್ನು ಪುಷ್ಪ ಸಿನಿಮಾ ಕೂಡ ಅಗಸ್ಟ್ ನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ಥಿಯೇಟರ್ ಗಳ ಮೇಲಿನ ನಿರ್ಬಂಧ ಮುಂದುವರೆದಿದ್ದು, ಪುಷ್ಪಾ ಕೂಡ ತೆರೆಗೆ ಬರೋದು ವಿಳಂಬವಾಗಲಿದೆ.