SSLC ಪರೀಕ್ಷೆ ವಿಚಾರದಲ್ಲಿ ಸಚಿವ ಸುಧಾಕರ್ – ಸುರೇಶ್ ಕುಮಾರ್ ಜಟಾಪಟಿ : ಗೊಂದಲಕ್ಕೆ ಸಿಲುಕಿದ್ರಾ ವಿದ್ಯಾರ್ಥಿಗಳು

ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯ ದಿನಾಂಕ ಘೋಷಣೆಯಾಗಿದೆ. ಆದ್ರೆ ಪರೀಕ್ಷೆಯ ವಿಚಾರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಸುಧಾಕರ್ ನಡುವೆ ಜಟಾಪಟಿ ಏರ್ಪಟ್ಟಿದೆ. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಎಸ್ಎಸ್ಎಲ್ ಸಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದರು. ಆರೋಗ್ಯ ಇಲಾಖೆಯ ಒಪ್ಪಿಗೆ ಪಡೆದು ಎಸ್ಎಸ್ಎಲ್ ಸಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದೆ‌ ಎಂದು ಹೇಳಿದ್ದರು. ಆದರೆ ಪರೀಕ್ಷೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಖುದ್ದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದರು. ಅಲ್ಲದೇ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲಾರಂಭ ಬೇಡ ಎನ್ನುವ ಹೇಳಿಕೆ ನೀಡಿದ್ದರು.

ಎಸ್ಎಸ್ಎಲ್ ಸಿ ಪರೀಕ್ಷೆಯ ವಿಚಾರ ಸಚಿವರ ನಡುವೆ ಗೊಂದಲಕ್ಕೆ ಕಾರಣವಾಗಿತ್ತು‌. ಸಚಿವ ಸುರೇಶ್ ಕುಮಾರ್ ಪರೀಕ್ಷೆಯ ವಿಚಾರದಲ್ಲಿ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರಾ ಅನ್ನೋ ಮಾತುಗಳು ಕೇಳಿಬಂದಿದೆ. ಇನ್ನೊಂದೆಡೆ ಸಚಿವ ಹೇಳಿಕೆ ಖುದ್ದು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ನೂಕಿದೆ.

ಈ‌ ನಡುವಲ್ಲೇ ಸಿಎಂ ಯಡಿಯೂರಪ್ಪ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಶಿಕ್ಷಣ ಸಚಿವ ಸುರೇಶ್  ಕುಮಾರ್ ಅವರು ಪೂರ್ವಭಾವಿ ಯಾಗಿ ನನ್ನೊಂದಿಗೆ ಚರ್ಚಿಸಿ, ಎಸ್ಎಸ್ಎಲ್ ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ ಎಂದಿದ್ದಾರೆ. 

Comments are closed.