ನವದೆಹಲಿ : ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ಸರಕಾರದ ವಿರುದ್ದ ಬಂಡಾಯ ಎದ್ದಿರುವ ಕಾಂಗ್ರೆಸ್ ಹಿರಿಯ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ, ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನ ರವಾನಿಸಿದ್ದಾರೆ. ನಿಮ್ಮ ಪಕ್ಷದಲ್ಲಿ ಇದ್ದುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಸಿಂಧಿಯಾ ಪತ್ರಬರೆದಿದ್ದಾರೆ. ಸಿಂಧಿಯಾ ಇದೀಗ ರಾಜೀನಾಮೆ ಸಲ್ಲಿಸುವ ಮುನ್ನ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು.

ಮಧ್ಯಪ್ರದೇಶದ ಸರ್ಕಾರ ವಿರುದ್ಧ ಕೆಲ ಸಚಿವರು, ಶಾಸಕರು ಬಂಡಾಯ ಎದ್ದಿರುವ ಬೆನ್ನಲ್ಲೇ ಇದೀಗ ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ ನೀಡಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಹಿಂದೆ ಮಧ್ಯಪ್ರದೇಶದ ಸಿಎಂ ಆಗುವ ಕನಸನ್ನ ಸಿಂಧಿಯಾ ಕಂಡಿದ್ದರು, ಆದರೆ ಕಾಂಗ್ರೆಸ್ ಕೈಕಮಾಂಡ್ ಕಮಲನಾಥ್‌ಗೆ ಮಣೆ ಹಾಕಿತ್ತು.

ಇದರಿಂದ ಸಿಂಧಿಯಾ ಹಾಗು ಸಿಂಧಿಯಾ ಬೆಂಬಲಿಗರಿಗೆ ಅಸಮಾಧಾನ ಶುರುವಾಗಿತ್ತು. ಸರ್ಕಾರ ಬೀಳುವ ಆತಂಕದಲ್ಲಿದ್ದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು ಜ್ಯೋತಿರಾಧಿತ್ಯ ಸಿಂಧಿಯಾ ರಾಜಿನಾಮೆ ಕಾಂಗ್ರೆಸ್ ಜಂಘಾಬಲವೆ ಕುಸಿಯುವಂತೆ ಮಾಡಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಸೋನಿಯಾ ಗಾಂಧಿ ಅವರಿಗೆ ರಾಜಿನಾಮೆ ಪತ್ರ ರವಾನಿಸಿದ್ದು ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನ ಎಲ್ಲಾ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ನಮೂದಿಸಿದ್ದರು.