ನವದೆಹಲಿ : ಮಹಿಳಾ ನೌಕರರಿಗೆ ಸಾಮಾನ್ಯವಾಗಿ ಹೆರಿಗೆ ರಜೆಯನ್ನು ಸರಕಾರಗಳು ನೀಡುತ್ತಿವೆ. ಆದರೆ ಇನ್ಮುಂದೆ ಸಿಂಗಲ್ ಪೇರೆಂಟ್ ಆಗಿರುವ ಕೇಂದ್ರ ಸರಕಾರದ ಪುರುಷ ನೌಕರರೂ ಕೂಡ ಮುಂದೆ ಮಕ್ಕಳ ಪಾಲನೆ-ಪೋಷಣೆಗೆ ಚೈಲ್ಡ್ ಕೇರ್ ಲೀವ್’ (ಸಿಸಿಎಲ್) ದೊರೆಯಲಿದೆ.

ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಪುರುಷ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಮಗುವಿನ ಪೋಷಣೆಯ ವಿಚಾರದಲ್ಲಿ ಪತಿಯೂ ಸಹ ಪತ್ನಿಯಷ್ಟೇ ಜವಾಬ್ದಾರಿ ಹೊಂದಿರು ತ್ತಾರೆ. ಹಾಗಾಗಿ ಅವರ ಹೊಣೆಯನ್ನು ಗಮನದಲ್ಲಿರಿಸಿ ಈ ಅವಕಾಶ ಕಲ್ಪಿಸಲಾಗಿದೆ. ವಿಧುರ, ಅವಿವಾಹಿತರು ಅಥವಾ ವಿಚ್ಛೇದನ ಪಡೆದವರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಮಕ್ಕಳ ಪಾಲನೆ ರಜೆಯ ಸೌಲಭ್ಯವನ್ನು ಪಡೆಯುವ ನೌಕರರು ತಾವು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪ್ರದೇಶವನ್ನು ಕೂಡ ತೊರೆಯಬಹುದಾಗಿದ್ದು, ಪ್ರವಾಸ ಭತ್ಯೆಯ ವಿನಾಯಿತಿಯನ್ನೂ ಕೂಡ ಪಡೆಯಲು ಹೊಸ ಆದೇಶದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಯೋಜನೆಯ ಪ್ರಯೋಜನ ಪಡೆಯುವ ನೌಕರರು, ಮೊದಲ 365 ದಿನಗಳವರೆಗೆ ಭತ್ಯೆ ಸಂಬಳದ ಶೇ. 100ರಷ್ಟು ಪಡೆಯಲು ಅವಕಾಶವಿದ್ದು, ನಂತರ 365 ದಿನಗಳಿಗೆ ಶೇ. 80ರಷ್ಟು ಭತ್ಯೆ ಸಂಬಳ ನೀಡಬಹುದಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ವಿಕಲಾಂಗ ಮಕ್ಕಳ ಪೋಷಣೆ ವಿಚಾರದಲ್ಲಿಈ ಮುಂಚೆ ಸಿಸಿಎಲ್ ಅಡಿಯಲ್ಲಿಇದ್ದಂತಹ 22 ವರ್ಷಗಳ ಮಿತಿಯನ್ನು ಕೂಡ ತೆಗೆದುಹಾಕಲಾಗಿದೆ. ಕೇಂದ್ರ ಸರಕಾರದ ಆದೇಶ ಇದೀಗ ಒಬ್ಬಂಟಿಯಾಗಿ ಮಕ್ಕಳ ಪಾಲನೆ ಮಾಡುತ್ತಿರುವ ಪುರುಷ ನೌಕರರಿಗೆ ಖಷಿಯನ್ನು ಕೊಟ್ಟಿದೆ. ಕೆಲಸದ ಒತ್ತಡದಿಂದ ಮುಕ್ತರಾಗಿ ಇನ್ಮುಂದೆ ಮಕ್ಕಲ ಪಾಲನೆ, ಪೋಷಣೆಯತ್ತ ಗಮನಹರಿಸಲು ಈ ಆದೇಶ ಸಹಕಾರಿ ಯಾಗಲಿದೆ ಎಂದು ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ.