ಆಕಾಶವೇ ಒಂದು ವಿಸ್ಮಯಗಳ ಆಗರ. ಹುಣ್ಣಿಮೆಯಿಂದ ಆರಂಭಿಸಿ ಹೊಳೆಯುವ ನಕ್ಷತ್ರಗಳವರೆಗೆ ಎಲ್ಲವೂ ನೋಡುವ ಕಣ್ಣಿಗೆ ಹೊಸತನವನ್ನು ನೀಡಬಲ್ಲವು. ಇಂತಹುದೇ ವಿಸ್ಮಯ ಸ್ಟ್ರಾಬೆರ್ರಿ ಮೂನ್ ನಿನ್ನೆ ಬಾನಂಗಳದಲ್ಲಿ ಗೋಚರಿಸಿ ಜನರ ಕಣ್ಮನ ಸೆಳೆದಿದೆ.

ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಎಂದು ಕರೆಯಲ್ಪಡುವ ಕೃಷಿಕರ ನೆಚ್ಚಿನ ಹುಣ್ಣಿಮೆಯಂದು ನಿನ್ನೆ ಆಕಾಶದಲ್ಲಿ ಚಂದ್ರನು ತನ್ನ ಮತ್ತೊಂದು ಸ್ವರೂಪ ತೋರಿದ್ದು, ಜನರು ವಿಸ್ಮಯಕ್ಕೆ ಬೆರಗಾಗಿ ಕಣ್ತುಂಬಿಕೊಂಡಿದ್ದಾರೆ.

ಕಿತ್ತಳೆ ಮಂಡಲದಂತೆ ಕಂಡುಬಂದ ಚಂದ್ರ ಬಳಿಕ ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದು, ಜೂನ್ 24 ರಂದು ಅಂದ್ರೆ ನಿನ್ನೆ ರಾತ್ರಿ ಈ ಸ್ಟ್ರಾಬೆರ್ರಿ ಮೂನ್ ಕಾಣಿಸಿಕೊಂಡಿದೆ. ಇದಕ್ಕೆ ಸ್ಟ್ರಾಬೆರ್ರಿ ಮೂನ್ ಜೊತೆ, ಬ್ಲೂಮಿಂಗ್ ಮೂನ್, ಗ್ರೀನ್ ಕಾರ್ನ್ ಮೂನ್, ಎಗ್ ಲೇಯಿಂಗ್ ಮೂನ್ ಎಂದು ಕರೆಯಲಾಗುತ್ತೆ.

ಭಾರತೀಯರಿಗೆ ಈ ಮೂನ್ ಸ್ಪಷ್ಟವಾಗಿ ಗೋಚರಿಸದ ಹಿನ್ನೆಲೆಯಲ್ಲಿ ಜನರು ಆನ್ ಲೈನ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ನೋಡಿ ಆನಂದಿಸಿದ್ದಾರೆ.

ಉತ್ತರ ಅಮೇರಿಕಾದಲ್ಲಿ ಸಾಮಾನ್ಯವಾಗಿ ಈ ಚಂದ್ರದರ್ಶನದ ಬಳಿಕ ಸ್ಟ್ರಾಬೆರ್ರಿ ಹಣ್ಣುಗಳ ಕೊಯ್ಲು ಆರಂಭಿಸಲಾಗುತ್ತದೆ. ಇದೇ ಕಾರಣಕ್ಕೆ ಈ ಹುಣ್ಣಿಮೆ ಚಂದ್ರನಿಗೆ ಸ್ಟ್ರಾಬೆರ್ರಿ ಮೂನ್ ಎಂದು ಕರೆಯುತ್ತಾರೆ ಎನ್ನಲಾಗಿದೆ.