ಸೌಂದರ್ಯ. ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿಯೇ ಆಗಿದ್ದ ಬಹುಭಾಷಾ ನಟಿ. ಆದರೆ ಇನ್ನಷ್ಟು ಕಾಲ ಬಹುಭಾಷೆಯ ಸಿನಿಮಾ ರಂಗದಲ್ಲಿ ಹೆಸರುಗಳಿಸಬಹುದಾಗಿದ್ದ ಕಾಲದಲ್ಲೇ ಅಪಘಾತದಲ್ಲಿ ಕಣ್ಮರೆಯಾಗಿ ಅಭಿಮಾನಿಗಳಿಗೆ ನಿರಾಸೆ ತಂದಿದ್ದರು. ಆದರೆ ಇದೀಗ ಮತ್ತೊಮ್ಮೆ ಸೌಂದರ್ಯ ಬದುಕಿನ ಕತೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಅದಕ್ಕೆ ಸಹಜಸುಂದರಿ ಖ್ಯಾತಿಯ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದಾರೆ.

ಹೌದು ಬಹುಭಾಷಾ ನಟಿ ಸೌಂದರ್ಯ ಬಯೋಪಿಕ್ ಬರಲಿದೆ. ಈ ಸುದ್ದಿ ಟಾಲಿವುಡ್ ಅಂಗಳದಿಂದ ಬಂದಿದ್ದು, ಸೌಂದರ್ಯ ನಟಿಸಿದ ಲ್ಲ ಭಾಷೆಗಳಲ್ಲೂ ಈ ಚಿತ್ರ ತೆರೆಗೆ ಬರಲಿದೆ.

ಸೌಂದರ್ಯ ಪಾತ್ರಕ್ಕೆ ಮೊದಲು ರಶ್ಮಿಕಾ ಮಂದಣ್ಣ ಹೆಸರು ಕೇಳಿಬಂದಿತ್ತಾದರೂ ಈಗ ಸಾಯಿ ಪಲ್ಲವಿ ಈ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೇ ಟಾಲಿವುಡ್ ಚಿತ್ರತಂಡ ಸಾಯಿ ಪಲ್ಲವಿಯವರೊಂದಿಗೆ ಮಾತುಕತೆ ನಡೆಸಿದೆ.

ಆದರೆ ಸಾಯಿ ಪಲ್ಲವಿ ಚಿರಂಜೀವಿ ಸೇರಿದಂತೆ ಹಲವು ನಟರ ಜೊತೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳು ಬಾಕಿ ಇರೋದರಿಂದ ಚಿತ್ರಕ್ಕೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.ಮಾತುಕತೆ ನಡೆದಿದ್ದು, ಡೇಟ್ಸ್ ಹೊಂದಾಣಿಕೆಯಾದ್ರೆ ಸಧ್ಯದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ.

90 ದಶಕದಲ್ಲಿ ಬಹುಭಾಷೆಗಳಲ್ಲಿ ನಟಿಸಿದ್ದ ಸೌಂದರ್ಯ ತಮ್ಮ ಅನುರೂಪವಾದ ಸೌಂದರ್ಯ, ಸಹಜ ನಟನೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಆದರೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಚುನಾವಣಾ ಪ್ರಚಾರಕ್ಕೆ ತೆರಳುವ ವೇಳೆ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇತ್ತೀಚಿನ ವರ್ಷದಲ್ಲಿ ಪ್ರಧಾನಿ ನರೇಂದ್ರ್ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರ ಬಯೋಪಿಕ್ ಗಳು ಸದ್ದು ಮಾಡಿದ್ದು, ಇದೀಗ ಸೌಂದರ್ಯ ಬಯೋಪಿಕ್ ನಿರ್ಮಾಣದ ಸುದ್ದಿ ಅಭಿಮಾನಿಗಳ ಕುತೂಹಲ ನೀರಿಕ್ಷೆ ಹೆಚ್ಚಿಸಿದೆ.