ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರು, ರೈತರು ಮತ್ತು ಜನ ಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಸ್ಪೀಕ್ ಅಪ್ ಇಂಡಿಯಾ ಕ್ಯಾಂಪೇನ್ ಆರಂಭಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ದೇಶದ ಜನರ ಧ್ವನಿಯನ್ನು ಗಟ್ಟಿಗೊಳಿಸುವುದು ಸ್ಪೀಕ್ ಅಪ್ ಇಂಡಿಯಾ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ನರೇಗಾ ಯೋಜನೆಯ ವಾರ್ಷಿಕ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸುವುದು, ದೇಶದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿಯನ್ನು ತಕ್ಷಣ ವರ್ಗಾವಣೆ ಮಾಡುವುದು, ಸಣ್ಣ ವ್ಯಾಪಾರಿಗಳಿ ಸಾಲದ ಬದಲಾಗಿ ಅನುದಾನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸ್ಪೀಕ್ ಅಪ್ ಇಂಡಿಯಾದ ಮೂಲಕ ಒತ್ತಾಯಿಸಲಿದೆ.

ಇಂದಿನಿಂದಲೇ ಸ್ಪೀಕ್ ಅಪ್ ಇಂಡಿಯಾ ಅಭಿಯಾನ ಆರಂಭಗೊಂಡಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರಕಟಿಸುವ ಪ್ಯಾಕೇಜ್ ಗಳು ಜನ ಸಾಮಾನ್ಯರಿಗೆ ತಲುಪಿಲ್ಲ. ರೈತರು, ಕೂಲಿಕರ್ಮಿಕರು, ಯುವಜನರು ಕೊರೊನಾದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಜನರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಯಾವುದೇ ನೆರವು ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ಅನುಕೂಲವಾಗಿರುವ ನ್ಯಾಯ್ ಯೋಜನೆಯನ್ನು ಜಾರಿಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಇನ್ನು ಅಭಿಯಾನದಲ್ಲಿ ಪಾಲ್ಗೊಂಡಿರುವ ಪ್ರತಿಪಕ್ಷ ನಾಯಕ ಸಿದ್ದಾರಾಮಯ್ಯ ಮಾತನಾಡಿ, ಸರ್ಕಾರಗಳು ಲಾಕ್‍ಡೌನ್‍ನಿಂದ ಸಂತ್ರಸ್ತರ ನೆರವಾಗುತ್ತಿಲ್ಲ. ಭಾವನಾತ್ಮಕ ರಾಜಕಾರಣ ಮಾಡುತ್ತಿವೆ, ಸುಳ್ಳು ಆಶ್ವಾಸನೆ ನೀಡುತ್ತಿವೆ ಎಂದು ಕಿಡಿಕಾರಿದ್ದಾರೆ.