ಇನ್ನೂ 15 ದಿನ ತೆರೆಯೋದಿಲ್ಲ ಕೃಷ್ಣಮಠ : ಕೊಲ್ಲೂರು, ಮಂದಾರ್ತಿಯಲ್ಲಿ ದೇವರ ದರ್ಶನ

0

ಉಡುಪಿ : ಕೊರೊನಾ ಲಾಕ್ ಡೌನ್ ನಡುವಲ್ಲೇ ರಾಜ್ಯ ಸರಕಾರ ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಲು ಮುಂದಾಗಿದೆ. ಆದ್ರೆ ಉಡುಪಿಯ ಕೃಷ್ಣ ಮಠ ಇನ್ನೂ 15 ದಿನಗಳ ಕಾಲ ಸಾರ್ವಜನಿಕರಿಗೆ ಕೃಷ್ಣನ ದರ್ಶನ ಭಾಗ್ಯ ದೊರೆಯುವುದಿಲ್ಲ. ಬದಲಾಗಿ ಕನಕನ ಕಿಂಡಿಯಿಂದಷ್ಟೇ ಕೃಷ್ಣನ ದರ್ಶನ ಪಡೆಯಬಹುದಾಗಿದೆ. ಆದರೆ ಕೊಲ್ಲೂರು ಮೂಕಾಂಬಿಕೆ ಹಾಗೂ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನಗಳು ಬಾಗಿಲು ತೆರೆಯಲಿವೆ.

ಅಷ್ಟಮಠಗಳ ಆಡಳಿತದಲ್ಲಿರುವ ಉಡುಪಿಯ ಕೃಷ್ಣಮಠದಲ್ಲಿ ಮಠಾಧೀಶರೇ ಕೃಷ್ಣನಿಗೆ ಪೂಜೆ ನೆರವೇರಿಸುತ್ತಿದ್ದಾರೆ. ಒಂದೊಮ್ಮೆ ಭಕ್ತರಿಗೆ ಮಠದ ಒಳಗೆ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿದ್ರೆ ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ಕೃಷ್ಣನ ಮಠದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಪೂಜೆ, ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲು ಸಮಸ್ಯೆಯಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಭಕ್ತರಿಗೆ ಕೃಷ್ಣ ದರ್ಶನ ಕಲ್ಪಿಸದಿರಲು ಅದಮಾರು ಮಠಾಧೀಶರು ತೀರ್ಮಾನ ಮಾಡಿದ್ದಾರೆ. ಭಕ್ತರಿಗೆ ಕೇವಲ ಕನಕನ ಕಿಂಡಿಯ ಮೂಲಕವಷ್ಟೇ ಭಕ್ತರು ಕೃಷ್ಣ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ರಾಜ್ಯದ ಪವಿತ್ರ ಪುಣ್ಯ ಕ್ಷೇತ್ರಗಳಾಗಿರುವ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ ಹಾಗೂ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನಗಳು ಜೂನ್ 1ರಿಂದ ಬಾಗಿಲು ತೆರೆಯಲಿವೆ. ದೇವಸ್ಥಾನಗಳಲ್ಲಿ ಭಕ್ತರಿಗೆ ಪೂಜೆ ಹಾಗೂ ಇತರ ಧಾರ್ಮಿಕ ಸೇವೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ದೇವಸ್ಥಾನಗಳನ್ನು ತೆರೆಯುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ದೇವಸ್ಥಾನವನ್ನು ಸ್ವಚ್ಚಗೊಳಿಸುವಂತೆ ಸಿಬ್ಬಂಧಿಗಳಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ದೇವಸ್ಥಾನದ ಸ್ಯಾನಿಟೈಸರ್ ಬಳಸಿ ಸ್ವಚ್ಚತಾ ಕಾರ್ಯ ನಡೆಯಲಿದೆ. ಜಿಲ್ಲೆಯ ಎಲ್ಲಾ ದೇವಸ್ಥಾನಗಳು ಸೋಮವಾರದಿಂದ ಬಾಗಿಲು ತೆರೆಯುತ್ತಿದ್ದು, ಸರಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದೇವರ ದರ್ಶನ ಪಡೆಯಬಹುದಾಗಿದೆ. ಅಲ್ಲದೇ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕಾಗಿದೆ.

Leave A Reply

Your email address will not be published.