ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ವಿವೇಕ್ ( 59 ವರ್ಷ) ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ನಟ ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿ ರುವುದು ತಿಳಿದು ಬಂದಿದ್ದು, ಹೃದಯದ ನಾಳದಲ್ಲಿ ರಕ್ತ ಸಂಚಾರಕ್ಕೆ ತೊಂದರೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಟ ವಿವೇಕ್ ಸಾವನ್ನಪ್ಪಿದ್ದಾರೆ.

ನಟ ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತರೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದಿದ್ದರು. ಅಲ್ಲದೇ ಎಲ್ಲರೂ ಕೂಡ ಕೋವಿಡ್ -19 ಲಸಿಕೆಗಳನ್ನು ಪಡೆಯುವಂತೆ ಮನವಿ ಮಾಡಿದ್ದರು. ಹಾಗೆ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸುವಂತೆಯೂ ಜನರಲ್ಲಿ ಮನವಿ ಮಾಡಿಕೊಂಡಿದ್ದರು.
ತಮಿಳಿನ ಬಹುಬೇಡಿಕೆಯ ಹಾಸ್ಯ ನಟರಾಗಿದ್ದ ವಿವೇಕ್ ಈಗಾಗಲೇ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ 5 ಬಾರಿ, ಚಲನಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಅವರು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಲ್ಲಿ ತಮಿಳು – ಅತ್ಯುತ್ತಮ ಹಾಸ್ಯನಟ 3 ಬಾರಿ ಗೆದ್ದಿದ್ದಾರೆ. ಉನ್ನರುಗೆ ನಾನ್ ಇರುಂಧಲ್ (1999), ರನ್ (2002) ಪಾರ್ಥಿಬನ್ ಕಾನವು (2003), ಅನ್ನಿಯಾನ್ (2005) ಮತ್ತು ಶಿವಾಜಿ (2007) ಆಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಗಳನ್ನು ಪಡೆದಿದ್ದರು.