ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅದೃಷ್ಟಪರೀಕ್ಷೆಗಿಳಿದಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ವರ್ಷ ಬಿಜೆಪಿ ಸೇರಿದ್ದ ಅಣ್ಣಾಮಲೈ ಪ್ರಸ್ತುತ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಮಾಜಿಸಿಗಂ ಈಗ ಚುನಾವಣಾ ಕಣಕ್ಕಿಳಿದಿದ್ದಾರೆ.

ತಮಿಳುನಾಡಿನ ಕರೂರು ಜಿಲ್ಲೆಯ ಅರವ ಕುರಚಿ ವಿಧಾನಸಭಾ ಕ್ಷೇತ್ರದಿಂದ ಅಣ್ಣಾಮಲೈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಕರೂರು ಅಣ್ಣಾಮಲೈ ಹುಟ್ಟೂರಾಗಿದ್ದು, ಅದೇ ವಿಧಾನಸಭಾ ಕ್ಷೇತ್ರದಿಂದ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಂಬಿಎ ಪದವಿ ಪಡೆದ ಅಣ್ಣಾಮಲೈ ಮೂಲತಃ ಕೃಷಿ ಕುಟುಂಬದಿಂದ ಬಂದಿದ್ದು, ಬದುಕಿನ ಹಲವು ಘಟನೆಗಳಿಂದ ಪ್ರೇರಣೆ ಪಡೆದು ಐಪಿಎಸ್ ಮುಗಿಸಿ ಪೊಲೀಸ್ ಅಧಿಕಾರಿಯಾಗಿದ್ದರು. ಕರ್ನಾಟಕದ ಚಿಕ್ಕಮಗಳೂರು , ಬೆಂಗಳೂರು ಸೇರಿದಂತೆ ಹಲವೆಡೆ ಕೆಲಸ ನಿರ್ವಹಿಸಿದ್ದ ಅಣ್ಣಾಮಲೈ ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಗಳಿಸಿದ್ದರು.

ಪ್ರಧಾನಿ ಮೋದಿಯವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಐಪಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸುವ ಹೊಣೆ ಹೊತ್ತಿದ್ದಾರೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ವಿಧಾನಸಭೆ ಪ್ರವೇಶಿಸುವ ಪ್ರಯತ್ನ ಕೂಡ ನಡೆಸಿದ್ದಾರೆ.

ತಮಿಳುನಾಡಿನ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು 20 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಈ ಪೈಕಿ ಚೈನೈನ ತೌಸಂಡ್ ಲೈಟ್ಸ್ ಕ್ಷೇತ್ರದಿಂದ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬು ಸುಂದರ್ ಕಣಕ್ಕಿಳಿದಿದ್ದರೇ, ಅರವ ಕುರಚಿಯಿಂದ ಅಣ್ಣಾಮಲೈ ಸ್ಪರ್ಧಿಸುತ್ತಿದ್ದಾರೆ.