ಕೊರೋನಾ ಸೋಂಕು ವಿಶ್ವವನ್ನೇ ನಲುಗಿಸಿ ಬಿಟ್ಟಿದೆ. ಆಸ್ತಿಕರಾದ ಭಾರತೀಯರು ಈ ಸೋಂಕಿನ ನಿರ್ಮೂಲನೆಗೆ ದೇವಾನುದೇವತೆಗಳಿಗೆ ಮೊರೆ ಇಟ್ಟಿದ್ದಾರೆ. ತಮಿಳುನಾಡಿನ ಜನರು ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿದ್ದು, ಕೊರೋನಾಗೆ ದೇವಿಯ ರೂಪಕೊಟ್ಟು ಪೂಜಿಸಲು ದೇವಾಲಯವನ್ನೇ ನಿರ್ಮಿಸಿದ್ದಾರೆ.

ದೇವರ ಆರಾಧನೆಗೆ ಹೆಸರಾದ ತಮಿಳುನಾಡಿನಲ್ಲಿ ದೇವರ ಸಾಲಿಗೆ ಮಾರಕ ಸೋಂಕು ಕೊರೋನಾ ಕೂಡ ಸೇರ್ಪಡೆಗೊಂಡಿದ್ದು, ಕೊರೋನಾದೇವಿ ಸ್ವರೂಪದಲ್ಲಿ ಆರಾಧನೆಗೆ ಮುನ್ನುಡಿ ಬರೆಯಲಾಗಿದೆ.

ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಕೊರೋನಾದೇವಿ ದೇಗುಲ ನಿರ್ಮಿಸಲಾಗಿದ್ದು, ಸೋಂಕಿನ ನಿರ್ಮೂಲನೆಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗುತ್ತಿದೆ.

ಇಲ್ಲಿ ದೇವಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದ್ದು, ಸೋಂಕಿನ ಆರ್ಭಟವನ್ನು ಕಡಿಮೆ ಮಾಡಿ ಜನರನ್ನು ಕಾಪಾಡುವಂತೆ ಭಕ್ತರು ದೇವಿಗೆ ಮೊರೆ ಇಡುತ್ತಿದ್ದಾರೆ.
ತಮಿಳುನಾಡಿನಲ್ಲೂ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಿದ್ದು, ಮೊದಲನೆ ಮತ್ತು ಎರಡನೇ ಅಲೆಯಲ್ಲಿ ಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದರೇ, ಲಕ್ಷಾಂತರ ಜನರು ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ.
