ಹಾಸನ : ಟಾಟಾ ಸುಮೋ ಹಾಗೂ ಕ್ವಾಲಿಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಹೊರವಲಯದ ಕೆಂಚಟ್ಟಳ್ಳಿ ಬಳಿಯ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಮೃತ ದುರ್ದೈವಿಗಳು. ಇವರೆಲ್ಲರೂ ಕೆಜಿಎಫ್ ಮೂಲದವರಾಗಿದ್ದಾರೆ. ಮುಳಬಾಗಿಲಿನಿಂದ ಟಾಟಾ ಸುಮೋದಲ್ಲಿ ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿದ್ರೆ, ಕ್ವಾಲಿಸ್‍ನಲ್ಲಿದ್ದವರು ಕೆಜಿಎಫ್ ನಿಂದ ಉಡುಪಿಗೆ ಮದುವೆಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಕೆಂಚಟ್ಟಳ್ಳಿ ಬಳಿ ಹಮ್ಸ್ ಇದ್ದು, ಟಾಟಾಸುಮೋ ಹಮ್ಸ್ ಬಳಿ ಸ್ಲೋ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕ್ವಾಲಿಸ್ ನಲ್ಲಿ 4 ಮಂದಿ ಸಾವನ್ನಪ್ಪಿದ್ರೆ, ಉಳಿದ 4 ಮಂದಿಗೆ ಗಾಯಗೊಂಡಿದ್ದಾರೆ.

ಇನ್ನು ಟಾಟಾ ಸುಮೋದಲ್ಲಿದ್ದ 10 ಮಂದಿಯೂ ಗಾಯಗೊಂಡಿದ್ದು, ಹಾಸನದ ಹಿಮ್ಸ್ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
