ಇತ್ತೀಚಿಗೆ ನಟ-ನಟಿಯರು ಕೇವಲ ನಟನೆ ಮಾತ್ರವಲ್ಲ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ಸುದೀಪ್, ಯಶ್,ಪುನೀತ್ ರಾಜಕುಮಾರ್, ಪ್ರಣೀತಾ ಸುಭಾಶ್ ಇದಕ್ಕೆ ಉದಾಹರಣೆ. ಇದೀಗ ಈ ಸಾಲಿಗೆ ತೆಲುಗು-ತಮಿಳು ನಟಿ ಸಮಂತಾ ಅಕ್ಕಿನೇನಿ ಕೂಡ ಹೊಸ ಸೇರ್ಪಡೆ.

ತನ್ನ 7 ಸಹೋದರಿಯರು ಹಾಗೂ ಕುಟುಂಬವನ್ನು ಸಲಹುವುದಕ್ಕಾಗಿ ಹಗಲು ರಾತ್ರಿ ಅಟೋ ಚಾಲನೆ ಮಾಡುವ ಮಹಿಳೆಯೊರ್ವಳಿಗೆ 12 ಲಕ್ಷ ಮೌಲ್ಯದ ಕಾರು ಗಿಫ್ಟ್ ಮಾಡಿ ಸಮಂತಾ ಹೃದಯವೈಶಾಲ್ಯತೆ ಮೆರೆದಿದ್ದಾರೆ. ಕವಿತಾ ಎಂಬ ಹೆಣ್ಣುಮಗಳು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಜೀವನ ನಿರ್ವಹಣೆಗಾಗಿ ತಮಿಳುನಾಡಿನಲ್ಲಿ ಅಟೋ ಚಾಲನೆ ಮಾಡುತ್ತಿದ್ದಾರೆ.

ಕವಿತಾ ಕಷ್ಟದ ಬಗ್ಗೆ ತಿಳಿದುಕೊಂಡ ಸಮಂತಾ ಆಕೆಗೆ ನೆರವಾಗುವುದಾಗಿ ಘೋಷಿಸಿದ್ದರು.

ಕೊಟ್ಟ ಮಾತಿನಂತೆ ಸಮಂತಾ ಕವಿತಾಗೆ 12 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಟೋ ಬದಲು ಕ್ಯಾಬ್ ಚಲಾಯಿಸಿ ಕುಟುಂಬವನ್ನು ಸಾಕಲಿ ಎಂಬುದು ಈ ಕೊಡುಗೆಯ ಉದ್ದೇಶ ಎಂದು ಸಮಂತಾ ಹೇಳಿದ್ದಾರೆ.

ಸಮಂತಾ ಸ್ವಂತ ಎನ್ಜಿಓ ವೊಂದನ್ನು ಹೊಂದಿದ್ದು ನಟನೆಯ ಜೊತೆಗೆ ಸಮಾಜ ಸೇವೆಯ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಈ ಎನ್ ಜಿಓ ಮೂಲಕ ಸಮಂತಾ ಹೆಚ್ಚಾಗಿ ಕಷ್ಟದಲ್ಲಿರುವ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೆರವಾಗುತ್ತಾರೆ.

2010 ರಲ್ಲಿ ತೆಲುಗು ಸಿನಿಮಾ ಯೇ ಮಾಯಾ ಚೇಸವೇ ಮೂಲಕ ನಟನೆಗೆ ಅಡಿ ಇಟ್ಟ ಸಮಂತಾ, ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.