ಬೆಂಗಳೂರು: ಕೊರೋನಾ ಎಲ್ಲರಿಗೂ ಸಂಕಷ್ಟವನ್ನು ತಂದಿತ್ತಿದೆ. ಇದಕ್ಕೆ ನಗರ ಪೊಲೀಸ್ ಇಲಾಖೆಯೂ ಹೊರತಲ್ಲ. ಹೀಗಾಗಿ ಇಲಾಖೆ ಬೊಕ್ಕಸ ತುಂಬಲು ಮುಂದಾಗಿರುವ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ದಂಡ ವಸೂಲಿ ಹಿಂದೆ ಬಿದ್ದಿದ್ದು, ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದವರ ಮನೆ ಬಾಗಿಲಿಗೆ ಖಾಕಿ ಪಡೆ ತೆರಳಿ ವಸೂಲಿಗೆ ಮುಂದಾಗಿದೆ.

ನಗರದಲ್ಲಿ ಅಕ್ಟೋಬರ್ 2020 ರ ವೇಳೆಗೆ 65 ಲಕ್ಷದ 23 ಸಾವಿರದ 498 ಸಂಚಾರಿ ಉಲ್ಲಂಘನೆ ನಿಯಮಗಳನ್ನು ದಾಖಲಿಸಲಾಗಿದೆ. ಇವುಗಳಿಂದ ಇಲಾಖೆಗೆ ಅಂದಾಜು 150 ಕೋಟಿ ದಂಡ ಬರಬೇಕಿದೆ. ಆದರೆ ಕೊರೋನಾ ಸೇರಿದಂತೆ ವಿವಿಧ ಕಾರಣಗಳಿಗೆ ಜನರು ದಂಡ ಪಾವತಿಗೆ ಮುಂದಾಗುತ್ತಿಲ್ಲ. ಹೀಗಾಗಿ ಸಂಚಾರಿ ಪೊಲೀಸರೇ ಮನೆ ಬಾಗಿಲಿಗೆ ತೆರಳಿ ದಂಡ ಸಂಗ್ರಹಿಸಲು ಮುಂದಾಗಿದ್ದಾರೆ.

ಅಕ್ಟೋಬರ್ ಒಂದು ತಿಂಗಳಿನಿಂದ ಬೆಂಗಳೂರು ಸಂಚಾರಿ ಪೊಲೀಸರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ 18 ಕೋಟಿ ದಂಡ ಸಂಗ್ರಹಿಸಿದ್ದಾರೆ. ಪ್ರಾಯೋಗಿಕವಾಗಿ ಮನೆ-ಮನೆಗೆ ತೆರಳಿ ದಂಡ ಸಂಗ್ರಹಿಸುವ ಯೋಜನೆಗೆ ಪೊಲೀಸ್ ಇಲಾಖೆ ಚಾಲನೆ ನೀಡಿದ್ದು, 10 ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದವರ ಮನೆಗೆ ಮೊದಲು ತೆರಳಲಾಗುತ್ತದೆ.
ಇನ್ನು ನಿಯಮ ಉಲ್ಲಂಘಸಿದ ವಾಹನ ಸವಾರರ ಸ್ಥಿತಿ-ಗತಿ ಆಧರಿಸಿ ಅವರಿಗೆ ದಂಡದ ಮೊತ್ತ ಪಾವತಿಸಲು ಸಮಯಾವಕಾಶ ಕೂಡ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಪೊಲೀಸರು 67 ಕೋಟಿಗೂ ಅಧಿಕ ಮೊತ್ತದ ದಂಡ ಸಂಗ್ರಹ ಮಾಡಿದ್ದಾರೆ.
ಪೊಲೀಸರು ಮನೆಗೆ ಬಂದು ದಂಡ ವಸೂಲಿ ಮಾಡೋದರಿಂದ ಅವಮಾನವಾಗುತ್ತೆ ಅಂತಾದರೇ ನೀವೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನಿಮ್ಮ ವಾಹನದ ಮೇಲೆ ಎಷ್ಟು ನಿಯಮ ಉಲ್ಲಂಘನೆ ಪ್ರಕರಣವಿದೆ ಎಂಬುದನ್ನು ಚೆಕ್ ಮಾಡಿ ದಂಡ ಪಾವತಿಸಿ ಬನ್ನಿ ಎಂದು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ನಗರದಲ್ಲಿ ಹದಗೆಟ್ಟ ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸೋ ವಾಹನ ಸವಾರರಿಗೆ ನಿಯಮ ಉಲ್ಲಂಘನೆಯ ಬಿಸಿ ತಟ್ಟತೊಡಗಿದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೇ ಪೊಲೀಸರು ನಿಮ್ಮ ಮನೆಗೆ ಬರಬಹುದು ಹುಶಾರು ಎಂಬ ಎಚ್ಚರಿಕೆಯನ್ನು ಇಲಾಖೆ ರವಾನಿಸಿದೆ.