ಉಡುಪಿ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಕರಾವಳಿ ಭಾಗದಲ್ಲಿಯೂ ಕೊರೊನಾ ಸೋಂಕಿನ ಭೀತಿಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಮಾರ್ಚ್ 31ರ ವರೆಗೂ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಿರುವ ರಾಜ್ಯ ಸರಕಾರ ಎಲ್ಲಾ ಜಿಲ್ಲಾಡಳಿತಗಳಿಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ. ಅಷ್ಟಕ್ಕೂ ಜಿಲ್ಲಾಡಳಿತ ಹೊರಡಿಸಿರೊ ನಿಷೇಧಾಜ್ಞೆ ಯಾವುದೆಕ್ಕೆ ಅನ್ವಯವಾಗುತ್ತೆ, ಯಾವೆಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು ಅನ್ನೋ ಕುರಿತ ಮಾಹಿತಿ ಇಲ್ಲಿದೆ.

ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜರಗುವ ಧಾರ್ಮಿಕ ಜಾತ್ರೆಗಳು, ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮ, ಸಂತೆ, ಜಾತ್ರೆ, ಉತ್ಸವ, ಸಾಮೂಹಿಕ ವಿವಾಹ ಹಾಗೂ ಇನ್ನಿತರ ಜನಸಂದಣಿ ಸೇರುವ ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆಯಿರುವುದರಿಂದ ಸರಕಾರದ ಆದೇಶದಂತೆ ಉಡುಪಿ ಜಿಲ್ಲಾಡಳಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಮಾರ್ಚ್ 18 ರಿಂದ ಮುಂದಿನ ಆದೇಶದ ವರೆಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಯಾವುದಕ್ಕೆಲ್ಲಾ ನಿಷೇಧ ?
1. ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ ಜಾತ್ರೆಗಳಲ್ಲಿ ಕೇವಲ ಧಾರ್ಮಿಕ ಕೇಂದ್ರಗಳ ಸಿಬ್ಬಂಧಿಗಳಿಗಷ್ಟೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು. ಉತ್ಸವ, ಜಾತ್ರೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿದೆ.
2. ದೇವಸ್ಥಾನಗಳಲ್ಲೂ ಕೇವಲ ದೇವರ ದರ್ಶನ ಹೊರತು ಪಡಿಸಿ, ಎಲ್ಲಾ ಸೇವೆಗಳನ್ನು ರದ್ದುಪಡಿಸಲಾಗಿದೆ. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರು ದೇವಸ್ಥಾನದ ವಸತಿ ಗೃಹಗಳಲ್ಲಿ ಉಳಿದುಕೊಳ್ಳುವುದಕ್ಕೆ ನಿಷೇಧಿಸಲಾಗಿದೆ.
3. ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪುಗುಂಪಾಗಿ ಸಾರ್ವಜನಿಕರು ಪ್ರವೇಶಿಸದಂತೆ ಸೂಚನೆ ನೀಡಲಾಗಿದೆ.

4. ಬೇಸಿಗೆ ಶಿಬಿರ, ಸಭೆ, ಸಮಾರಂಭ, ವಿಚಾರ ಸಂಕಿರಣ, ಕ್ರೀಡಾಕೂಟ ಸೇರಿದಂತೆ ಒಂದೆಡೆ ಜನ ಗುಂಪಾಗಿ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಲಾಗಿದೆ.
5. ವಾರದ ಸಂತೆಗಳ ಮೇಲೆಯೂ ನಿರ್ಬಂಧ ಹೇರಲಾಗಿದ್ದು, ಬೀಚ್ ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಭೇಟಿ ನೀಡುವುದಕ್ಕೂ ನಿಷೇಧ ಹೇರಲಾಗಿದೆ.

6. ಮದುವೆ, ನಿಶ್ಚತಾರ್ಥ ಸಮಾರಂಭಗಳನ್ನು ಹೆಚ್ಚಿನ ಜನಸಂದಣಿ ಸೇರದಂತೆ ಆಯೋಜಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
7. ಹೆಚ್ಚು ಜನರು ಸೇರುವ ಕಟುಂಬದ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ವತಃ ಸ್ಥಳದಲ್ಲಿ ಸರಳವಾಗಿ ಆಚರಿಸಬಹುದಾಗಿದೆ. ಆದರೆ ಅನಗತ್ಯವಾಗಿ ಹೊರಗಿನವರು ಸೇರದಂತೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

ಪಿಜಿ ಮತ್ತು ವಸತಿ ಗೃಹಗಳಿಗೂ ಜಿಲ್ಲಾಡಳಿತ ಖಡಕ್ ಆದೇಶ !
ಪಿಜಿ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣ ಸಂಸ್ಥೆಗಳು, ಕೋವಿಡ್-19 (ಕೊರೊನಾ) ರಜೆ ಘೋಷಣೆ ಮಾಡಿದ್ದಲ್ಲಿ, ತಮ್ಮ ಮನೆಗಳಿಗೆ ವಾಪಾಸ್ ತೆರಳು ಸೂಚನೆ ನೀಡಲಾಗಿದೆ. ಪಿಜಿ ಮತ್ತು ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಬಯಸಿದ ವಿದ್ಯಾರ್ಥಿಗಳಿಗೆ ಪಿಜಿಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಕರ್ನಾಟಕ ಸರಕಾರ ನೀಡಿರುವ ಸಲಹೆಗಳಂತೆ ವೈಯಕ್ತಿಕ ಸ್ವಚ್ಚತೆಯ ಬಗ್ಗೆ ಮನವರಿಕೆ ಮಾಡಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ನಿಯತಕಾಲಿಕವಾಗಿ ಪಿಜಿ ಮತ್ತು ವಸತಿ ನಿಲಯಗಳಲ್ಲಿ ನೈರ್ಮಲ್ಯತೆ ಹಾಗೂ ಸ್ವಚ್ಚತೆಯನ್ನು ಕಾಪಾಡುವುದು, ಪಿಜಿ ವಸತಿ ನಿಲಯಗಳ ಮಾಲೀಕರ ಅಥವಾ ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ. ಪಿಜಿ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವವರಿಗೆ ಅನಾನೂಕೂಲವಾಗದಂತೆ ಹಾಗೂ ಯಾವುದೇ ಸೋಂಕು ಹರಡದಂತೆ ಕೋಣೆಗಳಲ್ಲಿ ಜನದಟ್ಟಣೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೇ ಪಿಜಿ ಮತ್ತು ವಸತಿ ನಿಲಯಗಳ ಆವರಣದಲ್ಲಿ ಸ್ವಚತೆ ಕಾಪಾಡುವ ನಿಟ್ಟಿನಲ್ಲಿ ನೀಡಲಾದ ಆದೇಶಗಳನ್ನು ಅನುಸರಿಸದೆ ಕೊರೊನಾ ಹರಡಲು ಕಾರಣಕರ್ತರಾದವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುತ್ತದೆ. ಜಿಲ್ಲಾಡಳಿತ ಆದೇಶದನ್ವಯ ಪಿಜಿ ಮಾಲೀಕರು ತಮ್ಮ ವರದಿಯನ್ನು ಪ್ರತೀ ಎರಡು ದಿನಗಳಿಗೊಮ್ಮೆ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಲ್ಲಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ.