ಕೊರನಾ ಎಫೆಕ್ಟ್ : ರಾಜ್ಯದಲ್ಲಿ ಅಂತರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ?

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ 14 ಮಂದಿಗೆ ಕೊರೊನಾ ಇರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅಂತರಾಷ್ಟ್ರೀಯ ವಿಮಾನಗಳಿಗೂ ನಿರ್ಬಂಧ ಹೇರಲು ಚಿಂತನೆ ನಡೆಸಿದೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಈ ಹಿಂದೆ ಒಂದು ವಾರಗಳ ಕಾಲ ಥಿಯೇಟರ್, ಮಾಲ್, ಪಬ್, ಸಭೆ, ಸಮಾರಂಭ, ಮದುವೆ ಸೇರಿದಂತೆ ಹಲವು ಕಾರ್ಯಗಳ ಮೇಲೆ ಹೇರಿದ್ದ ನಿಷೇಧವನ್ನು ಮಾರ್ಚ್ 31ರ ವರೆಗೂ ಮುಂದುವರಿಸಿದೆ. ಇನ್ನು ರಾಜ್ಯದ ಹಲವು ಜಿಲ್ಲಾಡಳಿತಗಳು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಕೊರೊನಾ ವಿರುದ್ದ ಕಟ್ಟುನಿಟ್ಟ ಕ್ರಮಗಳನ್ನು ಕೈಗೊಂಡಿದೆ.

ಇದರ ಬೆನ್ನಲ್ಲೇ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲು ಚಿಂತನೆ ನಡೆಸಿದೆ. ವಿದೇಶದಿಂದ ಬಂದವರಿಂದಲೇ ಕೊರೊನಾ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗಿದೆ. ಅಮೇರಿಕಾ ಪ್ರವಾಸದಿಂದ ಹಿಂತಿರುಗಿದ 35 ವರ್ಷದ ವ್ಯಕ್ತಿಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಚಿಕಿತ್ಸೆಯನ್ನು ಕೈಗೊಳ್ಳಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಇನ್ನು ವಿದೇಶಗಳಿಂದ ಬಂದವರಿಂದಲೇ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಮಾರ್ಚ್ 19ರಿಂದಲೇ ಬೆಂಗಳುರಿಗೆ ಯಾವುದೇ ಅಂತರಾಷ್ಟ್ರೀಯ ವಿಮಾನಗಳು ಬರದಂತೆ ನಿರ್ಬಂಧ ವಿಧಿಸಲು ಚಿಂತಿಸಲಾಗಿದೆ. ನಾಗರೀಕರು ಯಾವುದೇ ಭೀತಿಗೆ ಒಳಗಾಗದೆ, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆ ಅಂತಾ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಅಂತರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ಹೇರಲು ಹೊರಟಿರೋ ರಾಜ್ಯ ಸರಕಾರದ ಕ್ರಮಕ್ಕೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಈ ನಿಟ್ಟುನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿ ಅಂತಾ ಆಗ್ರಹಿಸುತ್ತಿದ್ದಾರೆ.

Leave A Reply

Your email address will not be published.