ಉಡುಪಿ : ದೇಶದಾದ್ಯಂತ ಕೊರೊನಾ ಮಹಾಮಾರಿಯ ರೌದ್ರನರ್ತನ ಮುಂದುವರಿದಿದೆ. ಕರಾವಳಿಯಲ್ಲೂ ಡೆಡ್ಲಿ ಕೊರೊನಾ ಭೀತಿಯನ್ನು ಹುಟ್ಟಿಸಿತ್ತು. ಆದರೆ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಉಡುಪಿ ಜಿಲ್ಲೆ ಯಶಸ್ಸನ್ನು ಕಂಡಿದೆ. ಹೀಗಾಗಿಯೇ ಕೃಷ್ಣನಗರಿ ಉಡುಪಿ ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗುವತ್ತ ದಾಪುಗಾಲಿರಿಸಿದೆ. ಜಿಲ್ಲಾಡಳಿತದ ಕಾರ್ಯಕ್ಕೆ ಜನತೆ ಶಬ್ಬಾಶ್ ಗಿರಿ ನೀಡುತ್ತಿದ್ದಾರೆ.

ದೇಶದಲ್ಲಿ ಮೊದಲು ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು ನೆರೆಯ ಕೇರಳ ರಾಜ್ಯದಲ್ಲಿ. ಕೇರಳದಲ್ಲಿ ದಿನೇ ದಿನೇ ಕೊರೊನಾ ಸೋಂಕು ವ್ಯಾಪಿಸುತ್ತಿದ್ದರೂ ಕೂಡ ಯಾವ ಜಿಲ್ಲಾಡಳಿತಗಳು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಆದರೆ ವಿದೇಶದಿಂದ ಮರಳಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾಗೂ ಕಾಪುವಿನ ಎರಡು ಕುಟುಂಬಗಳು ಶಂಕಿತ ಕೊರೊನಾ ಸೋಂಕಿಗೆ ತುತ್ತಾಗುತ್ತಲೇ ಉಡುಪಿ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಎರಡೂ ಕುಟುಂಬಗಳು ವಿದೇಶದಿಂದ ಬಂದಿದ್ದರಿಂದಾಗಿ ಕೊರೊನಾ ಸೋಂಕು ಇರಬಹುದು ಅನ್ನೋ ಆತಂಕವೂ ಹೆಚ್ಚಿತ್ತು. ಆದರೆ ಎರಡೂ ಕುಟುಂಬಗಳ ಆರೋಗ್ಯ ತಪಾಸಣೆಯಲ್ಲಿ ಕೊರೊನಾ ಸೋಂಕು ಇಲ್ಲಾ ಅನ್ನೋದು ದೃಢಪಟ್ಟಿತ್ತು. ರಾಜ್ಯ, ಕೇಂದ್ರ ಸರಕಾರಗಳು ಎಚ್ಚೆತ್ತುಕೊಳ್ಳುವ ಮೊದಲೇ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಕೊರೊನಾ ಸೋಂಕಿನ ವಿರುದ್ದ ಮುನ್ನೆಚ್ಚರಿಕಾ ಕ್ರಮಗಳನ್ನುಕೈಗೊಂಡಿದ್ದರು.

ಉಡುಪಿ ಜಿಲ್ಲೆಗೆ ವಿದೇಶದಿಂದ ಬಂದಿದ್ದವರ ಮಾಹಿತಿಯನ್ನು ಕಲೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದರು. ಶಂಕಿತ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ್ರೆ ಅಂತವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸೋ ಪ್ಲ್ಯಾನ್ ಮಾಡಿದ್ದರು. ಅಲ್ಲದೇ ಕೊರೊನಾ ಸೋಂಕಿತರಿಗಾಗಿಯೇ ಅಜ್ಜರಕಾಡು ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಆರಂಭಿಸಿದ್ದರು.

ಮಣಿಪಾಲ, ಉಡುಪಿ ನಗರದಲ್ಲಿರುವ ಕೆಲವು ಕಾಲೇಜುಗಳಿಗೆ ರಜೆ ನೀಡಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ಕಾರ್ಯವನ್ನೂ ಮಾಡಿದ್ದರು. ಕೇರಳ ರಾಜ್ಯದಿಂದ ಬರುವ ವಿದ್ಯಾರ್ಥಿಗಳ ಮೇಲೂ ನಿಗಾ ಇರಿಸಿದ್ದರು. ಯಾವುದೇ ಕಾರಣಕ್ಕೂ ಜನತೆ ಅನಗತ್ಯವಾಗಿ ತಿರುಗಾಡಬೇಡಿ. ಕೊರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆವಹಿಸುವಂತೆಯ ಸೂಚನೆಯನ್ನು ಕೊಟ್ಟಿದ್ದರು.

ಈ ನಡುವಲ್ಲೇ ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಸಿಕೊಂಡಿತ್ತು, ತದನಂತರದಲ್ಲಿ ಕಲಬುರಗಿಯಲ್ಲಿ ವೃದ್ದನೋರ್ವ ಕೊರೊನಾ ಮಹಾಮಾರಿಗೆ ಬಲಿಯಾಗುತ್ತಲೇ ದೇಶದಾದ್ಯಂತ ಕೊರೊನಾ ವಿರುದ್ದದ ಹೋರಾಟ ಆರಂಭಗೊಂಡಿತ್ತು. ಚೀನಾ, ಅಮೇರಿಕಾ, ಇಟಲಿ ಸೇರಿದಂತೆ ಗಲ್ಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ವಿದೇಶಗಳಲ್ಲಿ ನೆಲೆಸಿರೊ ಉಡುಪಿಯ ಜನರು ತಮ್ಮೂರಿನತ್ತ ಮುಖಮಾಡಿದ್ದರು. ಉಡುಪಿ ಜಿಲ್ಲೆಗೆ ಎರಡು ಸಾವಿರಕ್ಕೂ ಅಧಿಕ ಮಂದಿಗೆ ವಿದೇಶಗಳಿಂದ ತವರಿಗೆ ಮರಳಿದ್ದರು. ಈ ನಡುವಲ್ಲೇ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಾಗಿತ್ತು. ಆದರೆ ಉಡುಪಿ ಜಿಲ್ಲಾಡಳಿತ ಲಾಕ್ ಡೌನ್ ಆದೇಶಕ್ಕೂ ಮುನ್ನವೇ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯನ್ನ ತಡೆಯೋದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಜಿಲ್ಲಾಧಿಕಾರಿ ಜಗದೀಶ್ ಅವರು ಜೆಡ್ಡುಗಟ್ಟಿದ್ದ ಆರೋಗ್ಯ ಇಲಾಖೆಗೆ ಬಿಸಿಮುಟ್ಟಿಸೋ ಕಾರ್ಯವನ್ನು ಮಾಡಿದ್ರು.

ವಿದೇಶಗಳಿಂದ ಮರಳಿರುವವರ ಮಾಹಿತಿಯನ್ನು ಜಿಲ್ಲಾಡಳಿತ ಸಂಗ್ರಹಿಸೋ ಕಾರ್ಯಕ್ಕೆ ಮುಂದಾಗಿತ್ತು. ಜಿಲ್ಲೆಯಲ್ಲಿ ಬರೋಬ್ಬರಿ 2000ಕ್ಕೂ ಅಧಿಕ ಮಂದಿಯನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಈ ನಡುವಲ್ಲೇ ಮೂವರಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗುತ್ತಲೇ ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿತ್ತು. ಆದರೆ ಉಡುಪಿ ಜಿಲ್ಲಾಡಳಿತ ಜನರ ಆತಂಕವನ್ನೂ ದೂರ ಮಾಡುತ್ತಾ ಕಟ್ಟುನಿಟ್ಟಾಗಿ ಲಾಕ್ ಡೌನ್ ಆದೇಶವನ್ನು ಪಾಲನೆ ಮಾಡಲು ಜನರಲ್ಲಿ ವಿನಂತಿ ಮಾಡಿಕೊಂಡಿತ್ತು.

ದಕ್ಷ ಅಧಿಕಾರಿಯೆನಿಸಿಕೊಂಡಿರೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಕೂಡ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಸಾಥ್ ಕೊಟ್ಟಿದ್ರು. ಲಾಕ್ ಡೌನ್ ಆದೇಶದ ನಡುವಲ್ಲಿಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನರಿಗೆ ಅಗತ್ಯವಸ್ತುಗಳ ಖರೀದಿಗೆ ಯಾವುದೇ ಸಮಸ್ಯೆಯಾಗದಂತೆ ಪೊಲೀಸರು ಕ್ರಮವಹಿಸಿದ್ದರು. ಹೀಗಾಗಿಯೇ ಜಿಲ್ಲಾಡಳಿತ ಬೆಳಗ್ಗೆ 6 ರಿಂದ 11 ಗಂಟೆಯ ವರೆಗೂ ನೀಡಿದ್ದ ಅವಧಿಯನ್ನು ಜನರು ಕೂಡ ಸದುಪಯೋಗ ಪಡಿಸಿಕೊಂಡಿದ್ದಾರೆ.

ಶೈಕ್ಷಣಿಕವಾಗಿ ಮುಂದುವರಿದಿರೋ ಉಡುಪಿ ಜಿಲ್ಲೆಯ ಜನತೆ ಲಾಕ್ ಡೌನ್ ಆದೇಶದ ಅವಧಿಯಲ್ಲಿಯೂ ಸುಶಿಕ್ಷಿತರಂತೆಯೇ ನಡೆದುಕೊಂಡಿದ್ದಾರೆ. ಶೇ.90ರಕ್ಕೂ ಅಧಿಕ ಮಂದಿ ಲಾಕ್ ಡೌನ್ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡಿದ್ದಾರೆ. ಅನಗತ್ಯವಾಗಿ ಬೀದಿಗೆ ಇಳಿಯುವವರಿಗೆ ಜಿಲ್ಲಾಧಿಕಾರಿ ಜಗದೀಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರ ವಿಷ್ಣುವರ್ಧನ್ ಅವರು ತಕ್ಕ ಪಾಠ ಕಲಿಸಿದ್ದಾರೆ. ಕೊರೊನಾ ಸೋಂಕು ಹರಡದಂತೆ ಉಡುಪಿ ಜಿಲ್ಲಾಡಳಿತ ಕೈಗೊಂಡ ಕ್ರಮ ಇದೀಗ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುಂದುವರಿದಿದೆ. ಈಗಾಗಲೇ ಜಿಲ್ಲೆಯಲ್ಲಿ ಮೂರು ಮಂದಿ ಕೊರೊನಾ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋದು ಬಹುತೇಕ ಖಚಿತ.

ಜಿಲ್ಲೆಯಲ್ಲಿ ಕೊರೊನಾ ಪೀಡಿತರೊಂದಿಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದವರನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ವರದಿಯೂ ನೆಗೆಟಿವ್ ಬಂದಿದೆ. ಹೋಮ್ ಕ್ವಾರಂಟೈನ್ ಆದೇಶ ಪಾಲನೆ ಮಾಡದವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸೋ ಮೂಲಕ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಆದೇಶ ಪಾಲನೆ ಮಾಡುವಂತೆ ಮಾಡಿದ್ದರು. ಇದೀಗ ಹೋಮ್ ಕ್ವಾರಂಟೈನ್ ನಲ್ಲಿ ಇರುವವರ ಅವಧಿಯೂ ಈಗಾಗಲೇ ಮುಕ್ತಾಯಗೊಂಡಿದೆ. ಕಳೆದ ಆರು ದಿನಗಳಿಂದಲೂ ಹೊಸದಾಗಿ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಮಾತ್ರವಲ್ಲ ಶಂಕಿತ ಕೊರೊನಾ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ವರದಿಯೂ ಇಲ್ಲಾ. ಹೀಗಾಗಿ ಉಡುಪಿ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮುವ ಲಕ್ಷಣಗಳು ಗೋಚರಿಸುತ್ತಿವೆ.

ಕೊರೊನಾ ಸೋಂಕು ಕಾಣಸಿಕೊಳ್ಳುತ್ತಲೇ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಹೀಗಿದ್ದರೂ ಕೂಡ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಅಧಿಕಾರಿ ಸಂಪೂರ್ಣ ಬೆಂಬಲದಿಂದ ಕೊರೊನಾ ವಿರುದ್ದ ಸಮರ್ಥವಾಗಿಯೇ ಹೋರಾಟ ನಡೆಸಿದ್ದಾರೆ. ಇತರ ಜಿಲ್ಲೆಗಳಿಗೆ ಹೋಲಿಸಿದ್ರೆ ಜನರಿಗೆ ಲಾಠಿ ರುಚಿ ತೋರಿಸದೆಯೇ ಜನಜಾಗೃತಿಯ ಮೂಲಕ ಜನರು ಮನೆಯಿಂದ ಹೊರಬಾರದಂತೆ ನೋಡಿಕೊಂಡಿದ್ದಾರೆ. ಫೇಸ್ ಬುಕ್ ಮೂಲಕ ನಿತ್ಯವೂ ಜನರೊಂದಿಗೆ ಸಂಪರ್ಕದಲ್ಲಿರುತ್ತಾ ಜನರ ಸಮಸ್ಯೆ, ಅಗತ್ಯತೆಗಳನ್ನು ಪೂರೈಸುವಲ್ಲಿ ಸಫಲರಾಗಿದ್ದಾರೆ. ಜನರಿಂದ ಬರುತ್ತಿದ್ದ ಅಭಿಪ್ರಾಯಗಳನ್ನೂ ಕ್ರೂಢಿಕರಿಸಿಕೊಂಡು ಕೊರೊನಾ ಸೋಂಕಿನ ವಿರುದ್ದ ಹೋರಾಟ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಇನ್ಮುಂದೆ ಕೊರೊನಾ ಸೋಂಕು ವ್ಯಾಪಿಸೋ ಸಾಧ್ಯತೆ ತೀರಾ ಕಡಿಮೆ. ಆದರೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಕೊರೊನಾ ಸೋಂಕು ಕಾಲಿರಿಸಲೇ ಬಾರದೆಂಬ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗಡಿಗಳನ್ನೂ ಜಿಲ್ಲಾಧಿಕಾರಿ ಜಗದೀಶ್ ಸೀಲ್ ಮಾಡಿದ್ದಾರೆ. ಖುದ್ದು ಜಿಲ್ಲೆಯ ಎಲ್ಲಾ ಗಡಿಗಳಿಗೂ ಭೇಟಿಕೊಟ್ಟು ಭದ್ರತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.

ಕೊರೊನಾ ಪೀಡಿತರಿಗಾಗಿಯೇ ಉಡುಪಿ ಜಿಲ್ಲೆಯಲ್ಲಿಯೇ ಖಾಸಗಿ ಆಸ್ಪತ್ರೆಯೊಂದನ್ನು ಸಂಪೂರ್ಣವಾಗಿ ಮೀಸಲಿಟ್ಟು ದೇಶಕ್ಕೆ ಮಾದರಿಯಾಗಿದ್ದಾರೆ. ಒಟ್ಟಿನಲ್ಲಿ ಕೊರೊನಾ ವಿರುದ್ದದ ಜಿಲ್ಲಾಧಿಕಾರಿಗಳ ಏಕಾಂಗಿ ಹೋರಾಟ ಕೊನೆಗೂ ಫಲಕೊಟ್ಟಿದೆ. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ಇದೀಗ ಜಿಲ್ಲಾಧಿಕಾರಿಯಾಗಿ ಜನತೆಗೆ ಶಿಸ್ತಿನ ಪಾಠ ಹೇಳೋ ಕೂಡ ಮಹಾಮಾರಿಯನ್ನು ಜಿಲ್ಲೆಯಿಂದ ಹೊಡೆದೋಡಿಸಿರೋ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಕಾರ್ಯಕ್ಕೆ ನಿಜ್ಕಕೂ ಶಬ್ಬಾಶ್ ಗಿರಿ ನೀಡಲೇ ಬೇಕು ಅಲ್ವಾ.

ಶುರುವಾಯ್ತು ಡಿಸಿ ಡಿಪಿ ಚಾಲೆಂಜ್
ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಕಾರ್ಯಕ್ಕೆ ಈಗಾಗಲೇ ಜನತೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕೊರೊನಾ ವಿರುದ್ದದ ಹೋರಾಟದಲ್ಲಿ ಯಶಸ್ವಿಯಾಗಿರುವ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಚಾಲೆಂಜ್ ಕೂಡ ಶುರುವಾಗಿದೆ. ನಮ್ಮ ಜಿಲ್ಲಾಧಿಕಾರಿ ನಮ್ಮ ಹೆಮ್ಮೆ. ನಿಮ್ಮೊಂದಿಗೆ ನಾವಿದ್ದೇವೆ ಅನ್ನೋ ಸ್ಲೋಗನ್ ಜೊತೆಗೆ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಾಥ್ ಕೊಡುವವರು ಜಿಲ್ಲಾಧಿಕಾರಿಗಳ ಪೋಟೋವನ್ನು ಡಿಪಿ, ಸ್ಟೇಟಸ್ ನಲ್ಲಿ ಹಾಕುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭಿಯಾನವೂ ಆರಂಭಗೊಂಡಿದೆ. ಜಿಲ್ಲಾಧಿಕಾರಿಗಳ ಕಾರ್ಯ ನಿಮಗೆ ಇಷ್ಟವಾಗಿದ್ರೆ ಈ ಕೂಡಲೇ ನಿಮ್ಮ ಡಿಪಿ, ಸ್ಟೇಟಸ್ ಅಲ್ಲಿ ಜಿಲ್ಲಾಧಿಕಾರಿಗಳ ಪೋಟೋವನ್ನು ಹಾಕಿಕೊಂಡು. ಜಿಲ್ಲಾಡಳಿತದ ಕಾರ್ಯಕ್ಕೆ ಥ್ಯಾಂಕ್ಸ್ ಹೇಳಿ.