ಬೆಂಗಳೂರು: ಸಿಲಿಕಾನ್ ಸಿಟಿಯ ಆಡಳಿತದ ಚುಕ್ಕಾಣಿ ಹಿಡಿಯುವ ಹಾಗೂ ಕಾರ್ಪೊರೇಟರ್ ಗಳಾಗುವ ಕನಸಿನಲ್ಲಿರೋರಿಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ದು, ಬಿಬಿಎಂಪಿ ಚುನಾವಣೆಗೆ ಮತ್ತೆ ವಿಘ್ನ ಎದುರಾಗಿದೆ.
ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿ ವಿಸ್ತರಿಸಲು ಮುಂದಾಗಿರೋದು ಚುನಾವಣೆ ಮುಂದೂಡಲು ಸಕಾರಣವಲ್ಲ ಎಂದು ವಿಶ್ಲೇಷಿಸಿದ್ದ ಹೈಕೋರ್ಟ್ ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೇ ಈಗ ಈ ಆದೇಶಕ್ಕೆ ಸುಪ್ರೀಂ ತಡೆ ನೀಡಿದ್ದು ಮುಂದಿನ ವಿಚಾರಣೆ 2021 ಫೆ.5 ಕ್ಕೆ ಮುಂದೂಡಿದೆ.
ಪ್ರಕರಣದ ಕುರಿತು ಸುಪ್ರೀಂ ನಲ್ಲಿ ಸಲ್ಲಿಕೆಯಾದ ಅರ್ಜಿ ವಾದ ಹಾಗೂ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗ ಸೇರಿದಂತೆ ಎಲ್ಲ ಪ್ರತಿ ವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಇದೇ ವೇಳೆ ಕರ್ನಾಟಕ ಹೈಕೋರ್ಟ್ ತ್ರೀ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಪ್ರಶ್ನಿಸಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ಕಾಂಗ್ರೆಸ್ ನಾಯಕ ಎಂ ಶಿವರಾಜು ಹೈಕೋರ್ಟ್ ಮೊರೆ ಹೋಗಿದ್ದರು.
ಚುನಾವಣಾ ಆಯೋಗವು ಸರ್ಕಾರಕ್ಕೆ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ವಿ.ರಾಮ್.ಸುಬ್ರಮಣಿ ನೇತೃತ್ವದ ಪೀಠ ಸರ್ಕಾರದ ವಾರ್ಡ್ ತಿದ್ದುಪಡಿ ವಿಚಾರ ಚುನಾವಣೆಗೆ ಯಾವುದೇ ಅಡ್ಡಿ ತರೋದಿಲ್ಲ. ಚುನಾವಣೆಗೆ ಸಿದ್ದತೆ ಆರಂಭವಾಗ ಮೇಲೆ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದಿದೆ.
ಹೀಗಾಗಿ ಸಂವಿಧಾನದ ವಿಧಿ 243(ಯು) ನಿಯಮದ ಪ್ರಕಾರ ಚುನಾವಣೆ ನಡೆಸಲು ಸೂಚನೆ ನೀಡಿತ್ತು. ಆದರೆ ಈ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.