ಪಾಪ‌ ಪರಿಹಾರಕ್ಕೆ ಡಿಕೆಶಿ ಟೆಂಪಲ್ ರನ್….! ಮೈಲಾರಲಿಂಗನಿಗೆ ಬೆಳ್ಳಿ ಹೆಲಿಕ್ಯಾಪ್ಟರ್ ಹರಕೆ ಸಲ್ಲಿಕೆ…!!

ಬಳ್ಳಾರಿ: ರಾಜಕೀಯ ಮಹತ್ವಾಕಾಂಕ್ಷೆಯಿಂದ ಕೆಪಿಸಿಸಿ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಪಾಪ ಪ್ರಾಯಶ್ಚಿತ್ತ ಪೂಜೆ ಹಾಗೂ ಬೆಳ್ಳಿ ಹೆಲಿಕಾಪ್ಟರ್ ಸಮರ್ಪಣೆ ಮೂಲಕ ಮೈಲಾರಲಿಂಗನಿಗೆ ಶರಣಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಪ್ರಸಿದ್ಧ ಕಾರಣಿಕ ಕ್ಷೇತ್ರ‌ಮೈಲಾರಲಿಂಗ್ ನ ದೇವಾಲಯಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ತಾವು ಅರಿಯದೇ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಕೋರಿ ಅಂದಾಜು ೧ ಕೆಜಿ ತೂಕದ ಬೆಳ್ಳಿಯ ಹೆಲಿಕ್ಯಾಪ್ಟರ್ ಪ್ರತಿಮೆಯನ್ನು ಸಮರ್ಪಿಸಿದರು.

ಕಳೆದ ಕೆಲವು ವರ್ಷದ ಹಿಂದೆ ಡಿ.ಕೆ.ಶಿವಕುಮಾರ್ ಹೆಲಿಕ್ಯಾಪ್ಟರ್ ನಲ್ಲಿ ಮೈಲಾರಲಿಂಗ್ ನ ದರ್ಶನಕ್ಕೆ ಆಗಮಿಸಿದ್ದರು. ಸಂಪ್ರದಾಯದ ಪ್ರಕಾರ ಮೈಲಾರಲಿಂಗ್ ದರ್ಶನಕ್ಕೆ ಆಕಾಶ ಮಾರ್ಗವಾಗಿ ಬರುವಂತಿಲ್ಲ ಮತ್ತು ಮೈಲಾರಲಿಂಗನ ಗುಡಿ ಮೇಲೆ ಹೆಲಿಕ್ಯಾಪ್ಟರ್ ಹಾರಿಸುವಂತಿಲ್ಲ.

ಈ ನಿಯಮ ಉಲ್ಲಂಘಿಸಿದ್ದಕ್ಕೆ ಡಿ‌.ಕೆ.ಶಿವಕುಮಾರ್ ಗೆ ಹಲವು ಬಗೆಯ ಸಂಕಷ್ಟಗಳು ಒದಗಿವೆ ಎಂದು ನಂಬಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕರ ಸೂಚನೆ ಮೇರೆಗೆ ಡಿಕೆಶಿ ಇಂದು ಪ್ರಾಯಶ್ಚಿತ್ತ ಪೂಜೆ ಸಲ್ಲಿಸಿ ಹೆಲಿಕ್ಯಾಪ್ಟರ್ ಸಮರ್ಪಿಸಿದ್ದಾರೆ.

ಇಂದು ರಸ್ತೆ ಮಾರ್ಗವಾಗಿ ಮೈಲಾರಲಿಂಗ್ ನ ದರ್ಶನಕ್ಕೆ ಬಂದ ಡಿಕೆಶಿಯವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಹಾಗೂ ವಾದ್ಯದೊಂದಿಗೆ ಸ್ವಾಗತ ಕೋರಲಾಯಿತು.

ಬಳಿಕ ದೇವಾಲಯದ ಆವರಣದಲ್ಲಿ ಪ್ರಾಯಶ್ಚಿತ್ತ ಸ್ನಾನ ಮಾಡಿದ ಡಿಕೆಶಿ ಮೈಲಾರಲಿಂಗನಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ಉನ್ನತ ರಾಜಕೀಯ ಸ್ಥಾನಮಾನ ಪ್ರಾಪ್ತಿಗೆ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.ಇನ್ನು ಪೂಜೆ ಬಳಿಕ ಮಾತನಾಡಿದ ಡಿಕೆಶಿ ಮೈಲಾರಲಿಂಗನ ಶಾಪದಿಂದಲೇ ನಾನು ಜೈಲು ಸೇರಬೇಕಾಯಿತು. ಅದಕ್ಕೆ ಬಂದು ಪಶ್ಚಾತ್ತಾಪ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯಿಂದ ಡಿಕೆಶಿ ಟೆಂಪಲ್ ರನ್ ಮತ್ತೆ ಆರಂಭಗೊಂಡಿದೆ.

Comments are closed.