ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ ಆಗಿ ಮೆರೆದ ವಿವೇಕ್ ಒಬೆರಾಯ್ ಕೂಡ ಬಾಲಿವುಡ್ ನ ಮತ್ತೊಂದು ಮುಖದ ಬಗ್ಗೆ ಮಾತನಾಡಿದ್ದು, ಬಾಲಿವುಡ್ ಮಂದಿಗೆ ಶಾಕ್ ನೀಡಿದ್ದಾರೆ. ಬಾಲಿವುಡ್ ಆಸ್ಟ್ರಿಚ್ ಸಿಂಡ್ರೋಮ್ ನಿಂದ ಬಳಲುತ್ತಿದೆ ಎಂದು ವಿವೇಕ್ ಕಮೆಂಟ್ ಮಾಡಿದ್ದಾರೆ.

ನಮ್ಮ ಉದ್ಯಮದಲ್ಲಿ ಸಮಸ್ಯೆ ಇದೆ. ಆದರೆ ಈ ಉದ್ಯಮದಲ್ಲಿ ಇರೋರು ಅದನ್ನು ಗುರುತಿಸಲು ಸಿದ್ಧವಿಲ್ಲ ಅನ್ನೋದು ದುರಂತ. ತಪ್ಪುಗಳನ್ನು ಗುರುತಿಸಲು ಹಾಗೂ ಅದನ್ನು ಸರಿಪಡಿಸಲು ಯಾರಿಗೂ ಇಷ್ಟವಿಲ್ಲ ಎಂದು ವಿವೇಕ್ ಹೇಳಿದ್ದಾರೆ.

ಬಾಲಿವುಡ್ ಗೆ ಎರಡು ಮುಖವಿದೆ ಎಂಬುದನ್ನು ಒಪ್ಪಿಕೊಂಡಿರುವ ವಿವೇಕ್ ಒಬೆರಾಯ್, ಎಲ್ಲ ಉದ್ಯಮಕ್ಕೂ ಎರಡು ಮುಖವಿರುತ್ತದೆ. ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. ಆದರೆ ನಾವೇನು ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲು, ತಿದ್ದಿಕೊಳ್ಳಲು ಜನರು ಸಿದ್ಧವಿರೋದಿಲ್ಲ ಎಂದು ವಿವೇಕ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಕುರಿತು ಮಾತನಾಡಿರುವ ವಿವೇಕ್, ಸುಶಾಂತ್ ಸಾವಿಗೂ ಬಾಲಿವುಡ್ ಉದ್ಯಮದ ಇನ್ನೊಂದು ಮುಖಕ್ಕೂ ಸಂಬಂಧವಿದೆ. ಆದರೆ ಇದನ್ನು ನೋಡಿಯೂ ನೋಡದಂತೆ ಕುಳಿತರು. ಕೆಲಸಮಯದ ಬಳಿಕ ಘಟನೆಯನ್ನೇ ಮರೆತುಬಿಟ್ಟರು ಎಂದು ವಿವೇಕ್ ವಿಷಾದ ವ್ಯಕ್ತಪಡಿಸಿದ್ದಾರೆ.

2002 ರಲ್ಲಿ ಬಾಲಿವುಡ್ ಪ್ರವೇಶಿಸಿದ ವಿವೇಕ್ ಒಬೆರಾಯ್ ಕೆಲಕಾಲ ನಾಯಕನಾಗಿ ಮಿಂಚಿದರೂ ಈಗ ಸೂಕ್ತ ಅವಕಾಶಗಳ ಕೊರತೆಯಿಂದ ಸೆಕೆಂಡ್ ಹೀರೋ ಹಾಗೂ ವಿಲನ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಐಶ್ವರ್ಯಾ ರೈ ಜೊತೆ ಪ್ರೇಮಸಂಬಂಧ ಹೊಂದಿದ್ದ ವಿವೇಕ್ ಗೆ ಸಲ್ಮಾನ್ ಖಾನ್ ಬೆದರಿಕೆ ಹಾಕಿದ್ದಾರೆ ಎಂಬುದು ಸುದ್ದಿಯಾಗಿದ್ದು, ವಿವೇಕ್ ಸಲ್ಮಾನ್ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಿದ್ದರು.

ಕರ್ನಾಟಕದ ಅಳಿಯನಾಗಿರುವ ವಿವೇಕ್ ಒಬೆರಾಯ್, ರಾಜಕಾರಣಿ ದಿ.ಆಳ್ವರವರ ಪುತ್ರಿಯನ್ನು ವರಿಸಿದ್ದಾರೆ.