ನಾಗ್ಪುರ : ಇತ್ತೀಚಿನ ದಿನಗಳಲ್ಲಿ ದಾಂಪತ್ಯದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಕೂಡ ಪತಿ ಪತ್ನಿಯ ನಡುವೆ ಡೈವೋರ್ಸ್ ಗೆ ಕಾರಣವಾಗುತ್ತಿದೆ. ಅಂತೆಯೇ ಇಲ್ಲೊಬ್ಬ ಪತಿರಾಯ ತನ್ನ ಪತ್ನಿ ತಂಬಾಕು ತಿನ್ನುತ್ತಾಳೆ. ಹೀಗಾಗಿ ತನಗೆ ಡೈವೋರ್ಸ್ ಕೊಡಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ತನ್ನ ಪತ್ನಿಗೆ ತಂಬಾಕು ತಿನ್ನುವ ಅಭ್ಯಾಸವಿದೆ. ಇದರಿಂದಾಗಿ ಆಕೆಯ ಆರೋಗ್ಯ ಹದಗೆಡುತ್ತಿರುತ್ತದೆ. ನನ್ನ ಹೆಂಡತಿ ಯಾವಾಗಲೂ ಅನಾರೋಗ್ಯದಲ್ಲೇ ಇರುತ್ತಾಳೆ, ಅಡುಗೆಯನ್ನೂ ಮಾಡುವುದಿಲ್ಲ. ಆಕೆಯನ್ನು ಆಸ್ಪತ್ರೆಗೆ ತೋರಿಸಲು ಹೆಚ್ಚಿನ ಹಣ ಬೇಕಾಗುತ್ತಿದೆ. ಇದೀಗ ನನಗೆ ಹೇಳದೆ ತನ್ನ ಮನೆಗೆ ಹೋಗಿ ಕುಳಿತಿದ್ದಾಳೆ. ಅದಕ್ಕಾಗಿ ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ ಬಿಡಿ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದಾನೆ.
ಈ ಕುರಿತು ವಿಚಾರಣೆ ನಡೆಸಿದ ನಾಗ್ಪುರ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಅತುಲ್ ಚಂದುರ್ಕರ್ ಮತ್ತು ಪುಷ್ಪಾ ಗಣದೇವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.ವಿಚ್ಚೇಧನಕ್ಕೆ ಕೇವಲ ತಂಬಾಕು ತಿನ್ನುತ್ತಾಳೆನ್ನುವುದೇ ಪ್ರಮುಖ ಕಾರಣವೇ ಆಗೋದಿಲ್ಲ. ಪತ್ನಿಯ ಚಿಕಿತ್ಸೆಗೆ ಆಸ್ಪತ್ರೆಗೆ ಹಣವನ್ನು ವ್ಯಯಿಸಲಾಗಿದೆ ಎಂದು ಹೇಳಲಾಗಿದೆ.
ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ದಾಂಪತ್ಯದಲ್ಲಿ ಸಣ್ಣಪುಟ್ಟ ವಿಚಾರಗಳು ಸಾಮಾನ್ಯ. ಅದನ್ನು ನೀವೇ ಸರಿಪಡಿಸಿಕೊಂಡು ಹೋಗಬೇಕು ಎಂದು ನ್ಯಾಯಾಲಯ ಹೇಳಿದೆ.