ಕೊಟ್ಟ ಮಾತು ತಪ್ಪಿದ ಯಡಿಯೂರಪ್ಪ…! ಆರ್.ಆರ್.ನಗರ ಗೆದ್ದ ಮುನಿರತ್ನಗಿಲ್ಲ ಸಚಿವ ಸ್ಥಾನ..!!

ಬೆಂಗಳೂರು: ಶತಾಯ-ಗತಾಯ ಸರ್ಕಾರ ಉಳಿಸಿಕೊಂಡು ಪೂರ್ಣಾವಧಿ ಸಿಎಂ ಎನ್ನಿಸಿಕೊಳ್ಳುವ ಸರ್ಕಸ್ ನಲ್ಲಿರುವ ಬಿಎಸ್ವೈ ಕೊಟ್ಟ ಮಾತು ತಪ್ಪಿದ ಆರೋಪಕ್ಕೆ ಗುರಿಯಾಗಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಮುನಿರತ್ನ ಮುಂದಿನ ಮಂತ್ರಿ ಎಂದೇ ಪ್ರಚಾರ ಮಾಡಿದ ಸಿಎಂ ಈಗ ಸಂಪುಟ ವಿಸ್ತರಣೆ ಪಟ್ಟಿಯಿಂದ ಮುನಿರತ್ನರನ್ನು ಕೈಬಿಟ್ಟಿದ್ದಾರೆ.

ರಾಜಕೀಯದಲ್ಲಿ ಯಾವ ಮಾತು ಸತ್ಯವಲ್ಲ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ ಕೆಲ ತಿಂಗಳ ಹಿಂದೆ ನಡೆದ ರಾಜರಾಜೇಶ್ವರಿ ನಗರ ಉಪಚುನಾವಣೆ  ವೇಳೆ ಮುನಿರತ್ನರನ್ನು ಮುಂದಿನ ಮಂತ್ರಿ ಎಂದೇ ಘೋಷಿಸಿದ್ದ ಸಿಎಂ ಬಿಎಸ್ವೈ ತಮ್ಮ ಮಾತು ಮರೆತಿದ್ದಾರೆ. ಸಂಪುಟ ವಿಸ್ತರಣೆ ಪಟ್ಟಿ ಫೈನಲ್ ಗೊಳಿಸಿ ರಾಜಭವನಕ್ಕೆ ಕಳಿಸಿರುವ ಸಿಎಂ ಅದರಲ್ಲಿ ಮುನಿರತ್ನರಿಗೆ ಸ್ಥಾನ ನೀಡಿಲ್ಲ.

ಪಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ಸಿಎಂ ಬಿಎಸ್ವೈ ಮುನಿರತ್ನ ಈಗಾಗಲೇ ಗೆದ್ದಾಗಿದೆ. ಗೆಲುವಿನ ಅಂತರ ನಿರ್ಧಾರವಾಗಬೇಕಷ್ಟೇ ಎಂದಿದ್ದರು. ಅಷ್ಟೇ ಅಲ್ಲ ಸಂಪುಟ ವಿಸ್ತರಣೆಯಲ್ಲಿ ಮುನಿರತ್ನ ಖಂಡಿತಾ ಮಂತ್ರಿಯಾಗುತ್ತಾರೆ ಎಂದಿದ್ದರು. ಆದರೆ ಚುನಾವಣೆ ಗೆಲುವಿನಕೆಲವೇ ತಿಂಗಳ ಅಂತರದಲ್ಲಿ ವಿಸ್ತರಣೆಯಾಗುತ್ತಿರುವ ಸಂಪುಟದಲ್ಲಿ ಮುನಿರತ್ನ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ಕಾಂಗ್ರೆಸ್ ತೊರೆದು, ಶಾಸಕ ಸ್ಥಾನವನ್ನು ಪಣಕ್ಕಿಟ್ಟು, ಮೈತ್ರಿ ಸರ್ಕಾರ ಉರುಳಿಸಿ  ಬಿಜೆಪಿ ಸರ್ಕಾರ ರಚನೆಗೆ ಕಾರಣವಾದವರಲ್ಲಿ ಮುನಿರತ್ನ ಕೂಡ ಒಬ್ಬರು. ಆದರೆ ಬಿಜೆಪಿ ಹೈಕಮಾಂಡ್ ಹಾಗೂ ಸ್ವತಃ ಸಿಎಂ ಬಿಎಸ್ವೈ ಈ ಸಂಗತಿಯನ್ನು ಮರೆತಂತಿದ್ದು, ಮುನಿರತ್ನರನ್ನು ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ ಎಂದು ಮುನಿರತ್ನ ಆಪ್ತರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಬುಧವಾರ ಮುಂಜಾನೆಯೇ ಮುನಿರತ್ನರಿಗೆ ಸಂಪುಟದಲ್ಲಿ ಸ್ಥಾನ ಇಲ್ಲ ಎಂಬ ಸಂಗತಿ ಖಚಿತವಾಗಿದ್ದು, ಈ ಬೆಳವಣಿಗೆ ಬಳಿಕ ಖುದ್ದು ಸಿಎಂ ಬಿಎಸ್ವೈ ಹಿರಿಯ ಸಚಿವರಾದ ಬಸವರಾಜ್ ಬೊಮ್ಮಾಯಿ ಹಾಗೂ ಆರ್.ಅಶೋಕ್ ಜೊತೆ ಸೇರಿ ಮುನಿರತ್ನರನ್ನು ಮನವೊಲಿಸುವ ಸರ್ಕಸ್ ಆರಂಭಿಸಿದ್ದರು.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರ ಪೈಕಿ ಎಂಟಿಬಿ ನಾಗರಾಜ್, ಆರ್.ಶಂಕರ್ ಮಾತ್ರ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆದಿದ್ದು, ಒಟ್ಟು ಸಚಿವರಾಗುವ 7 ಜನ ಶಾಸಕರ ಹೆಸರು ರಾಜಭವನ ತಲುಪಿದೆ.  ಮುನಿರತ್ನರನ್ನು ಕೈಬಿಡುವ ಮೂಲಕ ಬಿಜೆಪಿ ಸರ್ಕಾರ ಮತ್ತೆ ಸಂಕಷ್ಟಕ್ಕೆ ಆಹ್ವಾನ ನೀಡುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Comments are closed.