ತಮಿಳುನಾಡು: ಸತತ ಮೂರು ವರ್ಷಗಳಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದ ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮೀ ವಿಲಾಸ್ ಬ್ಯಾಂಕ್ ನ್ನು ಕೇಂದ್ರ ಸರ್ಕಾರ ಒಂದು ತಿಂಗಳ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿದೆ. ಆರ್ಬಿಐ ಸೂಚನೆ ಮೇರೆಗೆ ಈ ಕ್ರಮಕೈಗೊಳ್ಳಲಾಗಿದ್ದು, ಗ್ರಾಹಕರು ತಿಂಗಳಿಗೆ 25 ಸಾವಿರ ರೂಪಾಯಿ ಮಾತ್ರ ಹಿಂಪಡೆಯಬಹುದಾಗಿದೆ.

ನವೆಂಬರ್ 17 ರಿಂದ ಡಿಸೆಂಬರ್ 16 ವರೆಗೆ ಬ್ಯಾಂಕ್ ಮೇಲೆ ನಿಷೇಧ ಹೇರಲಾಗಿದೆ. ಸಧ್ಯ ಒಂದು ತಿಂಗಳಿಗೆ ಗ್ರಾಹಕರು ತಮ್ಮ ಠೇವಣಿಯಲ್ಲಿ 25 ಸಾವಿರ ರೂಪಾಯಿಯನ್ನು ಹಿಂಪಡೆಯಲು ಮಾತ್ರಅವಕಾಶವಿದೆ. ಆದರೆ ವೈದ್ಯಕೀಯ ಚಿಕಿತ್ಸೆ, ಮದುವೆ,ಉನ್ನತ ಶಿಕ್ಷಣ ಸೇರಿದಂತೆ ಅತಿ ಅವಶ್ಯ ಸಂದರ್ಭದಲ್ಲಿ ಆರ್ಬಿಐ ಅನುಮತಿಯೊಂದಿಗೆ ಹೆಚ್ಚಿನ ಹಣ ವಾಪಸ ಪಡೆಯಲು ಅವಕಾಶವಿದೆ.

ಬ್ಯಾಂಕ್ ಕಳೆದ ಮೂರು ವರ್ಷಗಳಿಂದ ನಷ್ಟದಲ್ಲಿದ್ದು, ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಲಹೆ ಮೇರೆಗೆಕೇಂದ್ರ ಆರ್ಥಿಕ ಸಚಿವಾಲಯ ಈ ಕ್ರಮ ಜರುಗಿಸಿದೆ.

ಹೂಡಿಕೆಯನ್ನು ಪ್ರೋತ್ಸಾಹಿಸುವಂತಹ ಯಾವುದೇ ಆಕರ್ಷಕ ಯೋಜನೆಗಳಿಲ್ಲದೇ ಇರುವುದು ಸೇರಿದಂತೆ, ಹೆಚ್ಚಿನ ವಿತ್ ಡ್ರಾಗಳಿಂದ ಬ್ಯಾಂಕ್ ಚೇತರಿಸಿಕೊಳ್ಳಲಾರದಷ್ಟು ಆರ್ಥಿಕ ನಷ್ಟಕ್ಕೆ ತುತ್ತಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ.