Sports budget 2023: ಲೆಕ್ಕಕ್ಕುಂಟು ಆಟಕ್ಕಿಲ್ಲದ ರಾಜ್ಯ ಕ್ರೀಡಾ ಬಜೆಟ್‌

ಬೆಂಗಳೂರು : (Sports budget 2023) ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಬಜೆಟ್‌ನಲ್ಲಿ ಒಲಿಂಪಿಕ್ಸ್‌ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಸಿಲಾಗಿದೆ. ಆದರೆ ಈ ಯೋಜನೆಗಳು ಕಾರ್ಯರೂಪಕ್ಕೆ ಬರುವುದೇ ? ಎಂದು ಯೋಚಿಸಿದಾಗ ಹಿಂದಿನ ಬಜೆಟ್‌ನಲ್ಲಿ ಹೇಳಿದ ಯೋಜನೆಗಳತ್ತ ಗಮನ ಹರಿಸಬೇಕಾಗುತ್ತದೆ.ಈ ವರ್ಷದ ಬಜೆಟ್‌ನಲ್ಲಿ ಕ್ರೀಡೆಗೆ ಘೋಷಣೆ ಮಾಡಿರುವ ಯೋಜನೆಗಳನ್ನು ಗಮನಿಸುವ ಮೊದಲು ಕಳೆದ ಬಾರಿಯ ಯೋಜನೆಗಳತ್ತ ಗನ ಹರಿಸುವುದು ಸೂಕ್ತ.

2022-23ರ ಘೋಷಣೆಗಳು:
ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಂಗಣ ಉನ್ನತೀಕರಣಕ್ಕೆ 100 ಕೋಟಿ ರೂ.ಗಳ ಸಮಗ್ರ ಯೋಜನೆ. ಇದು ಯಾವ ಜಿಲ್ಲೆಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂಬುದರ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಪ್ರತಿ ಬಜೆಟ್‌ನಲ್ಲಿಯೂ ಈ ಒಂದು ವಾಕ್ಯ ಪ್ರತಿ ವರ್ಷದ ಬಜೆಟ್‌ನಲ್ಲಿ ಇದ್ದೇ ಇರುತ್ತದೆ. ಸಂಖ್ಯೆಗಳು ಮಾತ್ರ ಬದಲಾಗಿರುತ್ತವೆ. ಕ್ರೀಡಾಂಗಣಗಳ ಸ್ಥಿತಿ ಮಾತ್ರ ಹಾಗೆಯೇ ಇರುತ್ತದೆ. ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 504 ಕೋಟಿ ರೂ. ವೆಚ್ಚದಲ್ಲಿ “ಕ್ರೀಡಾ ಅಂಕಣ” ನಿರ್ಮಾಣ.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಒತ್ತಟ್ಟಿಗಿರಲಿ, ಕೆಲವು ಗ್ರಾಮ ಪಂಚಾಯಿತಿಗಳಲ್ಲಾದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆಯಾ? ಎಂಬುದು ಮುಖ್ಯ. ನಮ್ಮ ಉಡುಪಿ ಜಿಲ್ಲೆಯ ಕೋಟ, ಕೋಟತಟ್ಟು ಮತ್ತು ಅದರ ಸುತ್ತ ಮುತ್ತ ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿಲ್ಲ. ಅಂದ ಮೇಲೆ ಇಂಥ ಸುಳ್ಳು ಯೋಜನೆಗಳ ಘೋಷಣೆಗಳಿಂದ ಏನು ಪ್ರಯೋಜನ? ಅಮೃತ ಕ್ರೀಡಾ ದತ್ತು ಯೋಜನೆಯಡಿ ರಾಜ್ಯದ 75 ಕ್ರೀಡಾಪಟುಗಳನ್ನು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ಗೆ ಕಳುಹಿಸಲು ತಲಾ 10 ಲಕ್ಷ ರೂ.ಗಳನ್ನು ವಿನಿಯೋಗಿಸುವುದು. ಒಲಿಂಪಿಕ್ಸ್‌ ಮಾತು ಒತ್ತಟ್ಟಿಗಿರಲಿ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಇತ್ತೀಚಿನ ಸಾಧನೆಯನ್ನು ಗಮನಿಸಿದರೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಮ್ಮ ಭಾಗವಹಿಸುವಿಕೆ ಯಾವ ಪ್ರಮಾಣದಲ್ಲಿರಬಹುದು ಎಂಬುದು ಸ್ಪಷ್ಟವಾಗುತ್ತದೆ. ಈ ಯೋಜನೆಗೆ ಆಯ್ಕೆಯಾದ ಕ್ರೀಡಾಪಟುಗಳನ್ನು ಗಮನಿಸಿದರೆ ಯೋಜನೆಯ ಉದ್ದೇಶ ಸ್ಪಷ್ಟವಾಗುತ್ತದೆ.

2023-24 ರ ಘೋಷಣೆಗಳು:
ಮುಂದಿನ ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಮತ್ತು ವಿಶೇಷ ಚೇತನರಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಲಾಗುವುದು. ಯುವಜನರಿಗೆ ಹೊರಾಂಗಣ ಜಿಮ್‌ ಒದಗಿಸಲಾಗುವುದು. ಇದಕ್ಕಾಗಿ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಈ ವರ್ಷದ ಬಜೆಟ್‌ನಲ್ಲಿ ಹೇಳಿದ್ದನ್ನೇ ಇಲ್ಲಿ ಪುನರಾವರ್ತನೆ ಮಾಡಲಾಗಿದೆ. ಒಳಾಂಗಣದ ಜಿಮ್‌ಗಳ ನಿರ್ಮಾಣದ ಬಗ್ಗೆ ಸೊಲ್ಲೆತ್ತದೆ ಈಗ ಹೊರಾಂಗಣ ಜಿಮ್‌ ಬಗ್ಗೆ ಮಾತನಾಡಲಾರಂಭಿಸಲಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುವ ಕ್ರೀಡಾಪಟುಗಳನ್ನು ಆಕರ್ಷಿಸುವ ಸಲುವಾಗಿ ಖಾಸಗಿ ಅಕಾಡೆಮಿಗಳಿಗೆ 25 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಲಾಗಿದೆ.ಬಾಸ್ಕೆಟ್‌ ಬಾಲ್‌ ಮತ್ತು ವಾಲಿಬಾಲ್‌ ಕ್ರೀಡೆಗಳನ್ನು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಪರಿಚಯಿಸಲು ಹೊಸ ಅಂಕಣಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗುವುದು.

ಈ ಬಾಸ್ಕೆಟ್‌ಬಾಲ್‌ ಕ್ರೀಡೆ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ. ಕೆಲವೊಂದು ವ್ಯಕ್ತಿಗಳ ಪ್ರತಿಷ್ಠೆಯ ಸಂಕೇತವಾಗಿದೆ. ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನೇರುವ ಸಲುವಾಗಿ ಈ ಕ್ರೀಡೆಗೆ ವಿಶೇಷ ಅನುಕೂಲ ಕಲ್ಪಿಸಲಾಗುತ್ತಿದೆ. ಈ ಆಸಕ್ತಿ ಇತರ ಕ್ರೀಡೆಗಳ ಬಗ್ಗೆ ಇಲ್ಲದಿರವುದು ದುರಂತ. ರಾಜ್ಯದಲ್ಲಿ ವಾಲಿಬಾಲ್‌ ಕ್ರೀಡೆ ನಶಿಸಿ ವರುಷಗಳೇ ಗತಿಸಿವೆ. ಈ ಬಗ್ಗೆ ಕ್ರಮ ಕೈಗೊಳ್ಳದ ಸರಕಾರ ಈಗ ಅಂಕಣ ಸ್ಥಾಪನೆಗೆ ಮುಂದಾಗಿದೆ. ಇದುವರೆಗೂ ಈ ಕ್ರೀಡೆಯ ಬಗ್ಗೆ ಕಾಳಜಿ ತೋರದ ಸರಕಾರ ಇದ್ದಕ್ಕಿದ್ದಂತೆ ಯುವಕರ ಬಗ್ಗೆ ಆಸಕ್ತಿ ತೋರಿದೆ.

ಇದನ್ನೂ ಓದಿ : Karnataka health Budget : ಕರ್ನಾಟಕ ರಾಜ್ಯ ಬಜೆಟ್‌ 2023 : ರಾಜ್ಯ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ ಬೊಮ್ಮಾಯಿ ಬಜೆಟ್

ಕರ್ನಾಟಕ ಒಲಿಂಪಿಕ್ಸ್‌ ಕನಸಿನ ಯೋಜನಾ ನಿಧಿ (Karnataka Olympic Dream Project Fund) ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಒಂದೆಡೆ ಅಮೃತ ಕ್ರೀಡಾ ದತ್ತು ಯೋಜನೆ ಇರುವಾಗ, ಕೇಂದ್ರ ಸರಕಾರದ ಟಾಪ್‌ ಯೋಜನೆ ಇರುವಾಗ ಇದೊಂದು ಕೇವಲ ಹೆಸರಿಗೆ ತರಲಾದ ಯೋಜನೆ ಎಂಬುದು ಸ್ಪಷ್ಟವಾಗುತ್ತದೆ. ಒಟ್ಟಾರೆ ಈ ಬಾರಿಯ ಬಜೆಟ್‌ನಲ್ಲಿ ಬರೇ ಲೆಕ್ಕಕ್ಕೆ ಒಂದಿಷ್ಟ ಯೋಜನೆಗಳಿದ್ದು ಆಟಕ್ಕೆ ಲಭ್ಯವಾಗುವುದು ಕಷ್ಟವೆನಿಸಿದೆ.

Sports budget 2023: State sports budget without counting games

Comments are closed.