Akasa Air : ಭಾರತದ ಬಿಗ್ ಬುಲ್ ಏಸ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಮಾಲೀಕತ್ವದ ಆಕಾಸ ಏರ್ಲೈನ್ಸ್ ಆಗಸ್ಟ್ ಏಳರಿಂದ ತನ್ನ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ವರದಿಯಾಗಿದೆ. ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಮೂಲಕ ಮುಂಬೈ – ಅಹಮದಾಬಾದ್ ಮಾರ್ಗದಲ್ಲಿ ಆಕಾಸ ಏರ್ ತನ್ನ ಮೊದಲ ಕಾರ್ಯಾಚರಣೆಯನ್ನು ಕೈಗೊಳ್ಳಲಿದೆ ಎನ್ನಲಾಗಿದೆ.
ಆಗಸ್ಟ್ ಏಳರಿಂದ ಮುಂಬೈ – ಅಹಮದಾಬಾದ್ ಮಾರ್ಗದಲ್ಲಿ 28 ಸಾಪ್ತಾಹಿಕ ವಿಮಾನಗಳು ಹಾಗೂ ಆಗಸ್ಟ್ 13ರಿಂದ ಬೆಂಗಳೂರು – ಕೊಚ್ಚಿ ಮಾರ್ಗದಲ್ಲಿ 28 ಸಾಪ್ತಾಹಿಕ ವಿಮಾನಗಳಿಗೆ ಟಿಕೆಟ್ ಮಾರಾಟಕ್ಕಾಗಿ ಬುಕ್ಕಿಂಗ್ ತೆರೆಯಲಾಗಿದೆ ಎಂದು ಆಕಾಸ ಏರ್ ಲೈನ್ ಅಧಿಕೃತ ಮಾಹಿತಿಯನ್ನು ನೀಡಿದೆ.
ಆರಂಭದಲ್ಲಿ ಆಕಾಸ ಏರ್ ತನ್ನ ಎರಡು 737 MAX ವಿಮಾನಗಳ ಮೂಲಕ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಬೋಯಿಂಗ್ ಒಂದು ಮ್ಯಾಕ್ಸ್ ವಿಮಾನವನ್ನು ಆಕಾಸ ಏರ್ಲೈನ್ ಸಂಸ್ಥೆಗೆ ಈಗಾಗಲೇ ವಿತರಣೆ ಮಾಡಿದೆ. ಮತ್ತೊಂದು ವಿಮಾನ ಈ ತಿಂಗಳ ಕೊನೆಯಲ್ಲಿ ಆಕಾಸ ಏರ್ಲೈನ್ ಕಂಪನಿ ಕೈ ಸೇರಲಿದೆ.
ಆಕಾಸ ಏರ್ನ ಸಹ – ಸಂಸ್ಥಾಪಕ ಹಾಗೂ ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಈ ವಿಚಾರವಾಗಿ ಮಾತನಾಡಿದ್ದು, ನಾವು ಹೊಚ್ಚ ಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಮೂಲಕ ಆಗಸ್ಟ್ ಏಳರಿಂದ ಮುಂಬೈ ಮತ್ತು ಅಹಮದಾಬಾದ್ ನಡುವಿನ ಮಾರ್ಗಗಳಿಗೆ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಆರಂಭಿಸಲಿದ್ದೇವೆ. ನಮ್ಮ ಏರ್ಲೈನ್ ನೆಟ್ವರ್ಕ್ನ್ನು ವಿಸ್ತರಣೆ ಮಾಡಲು ನಾವು ಹಂತ ಹಂತವಾದ ಯೋಜನೆಗಳನ್ನು ಹೊಂದಿದ್ದೇವೆ. ಹಂತ ಹಂತವಾಗಿ ಹೆಚ್ಚಿನ ನಗರಗಳಿಗೆ ನಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ. ನಮ್ಮ ಮೊದಲ ವರ್ಷದಲ್ಲಿ ಪ್ರತಿ ತಿಂಗಳು ನಮ್ಮ ಫ್ಲೀಟ್ಗೆ ಎರಡು ವಿಮಾನಗಳನ್ನು ಸೇರಿಸಲಿದ್ದೇವೆ ಎಂದು ಹೇಳಿದ್ದಾರೆ.
ಜುಲೈ ಏಳರಂದು ಆಕಾಸ ಏರ್ ವಿಮಾನಯಾನ ಸಂಸ್ಥೆಯು ಡಿಜಿಸಿಎಯಿಂದ ಏರ್ ಆಪರೇಟರ್ ಪ್ರಮಾಣಪತ್ರವನ್ನು ಸ್ವೀಕರಿಸಿದ್ದ ಬಗ್ಗೆ ಮಾಹಿತಿಯನ್ನು ನೀಡಿತ್ತು. ಡಿಜಿಸಿಎ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಸಿರು ನಿಶಾನೆ ತೋರಿದ್ದರಿಂದ 72 ಮ್ಯಾಕ್ಸ್ ವಿಮಾನಗಳನ್ನು ಖರೀದಿ ಮಾಡಲು ಕಳೆದ ವರ್ಷ ನವೆಂಬರ್ 26ರಂದು ಬೋಯಿಂಗ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಇದನ್ನೂ ಓದಿ : Dinesh Gunawardena : ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ದೆನಾ ಪ್ರಮಾಣ ವಚನ
Akasa Air To Start Maiden Commercial Flight On August 7; Opens Ticket Sales