Indian Economy : ಭಾರತದ ಆರ್ಥಿಕತೆ 2030ರಲ್ಲಿ ಜಪಾನ್‌ ಆರ್ಥಿಕತೆಯನ್ನು ಮೀರಲಿದೆ: ಐಎಚ್‌ಎಸ್‌ ಮಾರ್ಕಿಟ್‌ ವರದಿ

ಬೆಂಗಳೂರು: ಭಾರತದ ಆರ್ಥಿಕತೆಯು (Indian Economy) 2030ರಲ್ಲಿ ಜಪಾನ್‌ ಆರ್ಥಿಕತೆಯನ್ನು (Japan Economy) ಹಿಂದಿಕ್ಕಿ ಇಡೀ ಏಷ್ಯಾದಲ್ಲೇ 2ನೆಯ ಅತಿದೊಡ್ಡ ಆರ್ಥಿಕತೆಯ (Economy) ಸ್ಥಾನಕ್ಕೇರುವ ಸಾಧ್ಯತೆಯಿದೆಯೆಂದು ಐಎಚ್‌ಎಸ್‌ ಮಾರ್ಕಿಟ್‌ ಸಂಸ್ಥೆಯ ವರದಿ ತಿಳಿಸಿದೆ. ಇಷ್ಟು ಮಾತ್ರವಲ್ಲ, ಇಡೀ ವಿಶ್ವದಲ್ಲೇ ಭಾರತದ ಒಟ್ಟು ದೇಶೀಯ ಉತ್ಪಾದಕತೆಯು (ಜಿಡಿಪಿ-GDP) ಜರ್ಮನಿ ಹಾಗೂ ಬ್ರಿಟನ್‌ ದೇಶಗಳ ಜಿಡಿಪಿಯನ್ನೂ ಹಿಂದಿಕ್ಕಿ ವಿಶ್ವದ 3ನೇ ದೇಶವಾಗಲಿದೆಯೆಂದು ವರದಿ ತಿಳಿಸಿದೆ. ಸದ್ಯ,ಭಾರತವು ವಿಶ್ವದಲ್ಲೇ 6ನೆಯ ಅತಿದೊಡ್ಡ ಆರ್ಥಿಕತೆಯ ದೇಶವಾಗಿದ್ದು ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಹಾಗೂ ಬ್ರಿಟನ್‌ ದೇಶಗಳ ನಂತರದ ಸ್ಥಾನದಲ್ಲಿದೆ.

ಭಾರತದ ನಾಮಮಾತ್ರದ ಜಿಡಿಪಿಯು 2021ರ 2.7 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗಳಿಂದ 2030ರಲ್ಲಿ ಸುಮಾರ 8.4 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆಯೆಂದು ಅಂದಾಜಿಸಲಾಗಿದೆ. ಈ ಅತಿವೇಗದ ಆರ್ಥಿಕ ಬೆಳವಣಿಗೆಯಿಂದ ಭಾರತದ ಜಿಡಿಪಿಯು ಜಪಾನ್‌ ಜಿಡಿಪಿಗಿಂತ ಹೆಚ್ಚಾಗಲು ಹಾಗೂ ಏಷ್ಯಾ-ಪೆಸಿಫಿಕ್‌ ವಲಯದಲ್ಲಿ 2ನೆಯ ಅತಿ ದೊಡ್ಡ ಆರ್ಥಿಕತೆಯಾಗಲು ಸಹಾಯಕವಾಗಲಿದೆಯೆಂದು ವರದಿ ತಿಳಿಸಿದೆ. ಇದಲ್ಲದೇ, 2030ರ ಸುಮಾರಿಗೆ ಭಾರತದ ಆರ್ಥಿಕತೆಯು ಪಶ್ಚಿಮ ಯೂರೋಪ್‌ನ ಅತಿದೊಡ್ಡ ಆರ್ಥಿಕತೆಯ ದೇಶಗಳಾದ ಜರ್ಮನಿ, ಫ್ರಾನ್ಸ್‌, ಹಾಗೂ ಬ್ರಿಟನ್‌ ದೇಶಗಳ ಆರ್ಥಿಕತೆಯನ್ನೂ ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆಯೆಂದೂ ವರದಿ ತಿಳಿಸಿದೆ.

ಒಟ್ಟಾರೆಯಾಗಿ ಭಾರತದ ಆರ್ಥಿಕತೆಯು ಮುಂದಿನ ದಶಕದಲ್ಲಿ ವಿಶ್ವದಲ್ಲೇ ಅತಿವೇಗದಿಂದ ಬೆಳವಣಿಗೆಯಾಗುತ್ತಿರುವ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಒಂದು ದೇಶವಾಗಿರಲಿದೆ ಎನ್ನುವ ಮುನ್ಸೂಚನೆ ನೀಡಲಾಗಿದೆ. ಭಾರತದ ಆರ್ಥಿಕತೆಯ ಈ ದೀರ್ಘಕಾಲಿಕ ಮುನ್ನೋಟಕ್ಕೆ ಆರ್ಥಿಕ ಬೆಳವಣಿಗೆಗೆ ಕಾರಣವಾಗುವ ಅನೇಕ ಪ್ರಮುಖ ಅಂಶಗಳ ಬೆಂಬಲವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅತಿದೊಡ್ಡ ಹಾಗೂ ಅತಿವೇಗವಾಗಿ ಬೆಳೆಯುತ್ತಿರುವ ಭಾರತದ ಮಧ್ಯಮವರ್ಗ ಇದಕ್ಕೆ ಪ್ರಮುಖ ಧನಾತ್ಮಕ ಕಾರಣವಾಗಿದ್ದು ಬಳಕೆದಾರರು ಅಗತ್ಯವಸ್ತುಗಳನ್ನು ಕೊಳ್ಳುವ ಶಕ್ತಿ ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ. ದೇಶದ ಬಳಕೆದಾರರ ಕೊಳ್ಳುವಿಕೆಯ ವೆಚ್ಚವು 2020ರಲ್ಲಿ 1.5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗಳಿದ್ದುದು 2030ರ ವೇಳೆಗೆ ದ್ವಿಗುಣವಾಗಲಿದೆ ಎಂದೂ ವರದಿ ತಿಳಿಸಿದೆ.

ಭಾರತದ ಜಿಡಿಪಿಯು 2021-2022ರ ಆರ್ಥಿಕ ವರ್ಷದಲ್ಲಿ ಶೇ 8.2ರಷ್ಟು ಇರಲಿದೆಯೆಂದು ಮುನ್ಸೂಚನೆ ನೀಡಲಾಗಿದ್ದು ಇದಕ್ಕೂ ಮುನ್ನ ಜಿಡಿಪಿಯು ಶೇ 7.3ಕ್ಕೆ ಕುಸಿಯುವುದೆಂದು ನಿರೀಕ್ಷಿಸಲಾಗಿತ್ತು. ಭಾರತದ ಆರ್ಥಿಕತೆಯು 2022-2023ರ ಆರ್ಥಿಕ ವರ್ಷದಲ್ಲೂ ಶೇ 6.7ರ ವೇಗದಲ್ಲಿ ಬಲವಾದ ಬೆಳವಣಿಗೆ ಕಾಣಲಿದೆಯೆಂದು ಮುನ್ಸೂಚನೆ ನೀಡಲಾಗಿದೆ. ದಿನೇ-ದಿನೇ ತನ್ನ ವೆಚ್ಚ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಭಾರತದ ಮಧ್ಯಮ ವರ್ಗ ಹಾಗೂ ನಿರಂತರ ಬೆಳವಣಿಗೆ ಕಾಣುತ್ತಿರುವ ಭಾರತದ ಅತಿದೊಡ್ಡ ಉದ್ಯಮರಂಗವು ಭಾರತದ ಉತ್ಪಾದನಾ, ಮೂಲಸೌಕರ್ಯ, ಹಾಗೂ ಸೇವಾ ವಲಯಗಳಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಅತಿ ಹೆಚ್ಚಿನ ಹೂಡಿಕೆ ಮಾಡಲು ಪ್ರೇರೇಪಿಸುತ್ತಿವೆ.

ಇದನ್ನೂ ಓದಿ: top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

ಇದನ್ನೂ ಓದಿ: Agriculture Loan : ರೈತರಿಗೆ ಗುಡ್ ನ್ಯೂಸ್ ! 2022-23ರಲ್ಲಿ ಕೃಷಿ ಸಾಲದ ಗುರಿ 18 ಲಕ್ಷ ಕೋಟಿಗೆ ಹೆಚ್ಚಳವಾಗುವ ಸಂಭವ

(Indian economy can overtake Japan economy by 2020)

Comments are closed.