ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಂದಿ ಬೇರೆ ಕಡೆಗಳಲ್ಲಿ ಸಿಲುಕಿದ್ದಾರೆ. ಆದ್ರೀಗ ಲಾಕ್ ಡೌನ್ ನಡುವಲ್ಲೇ ಕೇಂದ್ರ ಸರಕಾರ ದೇಶದ 15 ನಗರಗಳಿಗೆ ರೈಲ್ವೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೇ ರೈಲ್ವೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಲೇ IRCTC ವೆಬ್ ಸೈಟ್ ಓಪನ್ ಆಗದೆ ಪ್ರಯಾಣಿಕರು ನಿರಾಸೆಗೊಳಗಾಗಿದ್ದಾರೆ.

ಇಂದು ಸಂಜೆಯಿಂದಲೇ ಭಾರತೀಯ ರೈಲ್ವೆ ಇಲಾಖೆ ಆನ್ ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಿದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ನಲ್ಲಿ ಸಿಲುಕಿದ್ದ ಲಕ್ಷಾಂತರ ಮಂದಿ ಒಮ್ಮೆಲೆ ವೆಬ್ ಸೈಟ್ ಗೆ ದಾಂಗುಡಿಯಿಟ್ಟಿದ್ದಾರೆ. 4 ಗಂಟೆಗೆ ಆನ್ ಲೈನ್ ಬುಕ್ಕಿಂಗ್ ಆರಂಭವಾಗುತ್ತಲೇ ವೆಬ್ ಸೈಟ್ ಕ್ರ್ಯಾಶ್ ಆಗಿದೆ. ಟಿಕೆಟ್ ಬುಕ್ಕಿಂಗ್ ಮಾಡುವ ಆಸೆಯಿಂದ www.irctc.in ಓಪನ್ ಮಾಡಿದ್ರೆ ವೆಬ್ ಸೈಟ್ ಓಪನ್ ಆಗುತ್ತಿರಲಿಲ್ಲ.

ಇದರಿಂದಾಗಿ ರೈಲ್ವೆ ಪ್ರಯಾಣಿಕರು ನಿರಾಸೆ ಅನುಭವಿಸಿದ್ದಾರೆ. ಮೇ 12 ರಿಂದ ದೇಶದ 15 ನಗರಗಳಿಗೆ ರೈಲುಗಳ ಸಂಚಾರಕ್ಕೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಿದ್ದು, ರೈಲ್ವೆ ಟಿಕೆಟ್ ಕೌಂಟರ್ ಬಂದ್ ಮಾಡಿದೆ. ಕೇವಲ ಆನ್ ಲೈನ್ ಮೂಲಕವೇ ಟಿಕೆಟ್ ಬುಕ್ಕಿಂಗ್ ಮಾಡುವಂತೆ ಹೇಳಿತ್ತು.