ನವದೆಹಲಿ : ದೇಶದಲ್ಲಿ ಒಂದೆಡೆ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದ್ದು, ಎರಡು ಹಂತಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನವಾಗಿವೆ. ಉಳಿದಿರುವ 12 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 7 ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಕೋವಿಡ್ 19 ಕಾರಣದಿಂದ ಆರ್ಥಿಕ ಕುಸಿತ ಉಂಟಾಗಿರುವುದರಿಂದ, ಕೆಲವು ಸಂಸ್ಥೆಗಳ ಷೇರನ್ನು ಮಾರಿ ಹಣ ಸಂಗ್ರಹಿಸುವುದು ಸರಕಾರದ ಉದ್ದೇಶ ಎನ್ನಲಾಗಿದೆ. ಕೆಲವು ಸರ್ಕಾರಿ ಸಮಿತಿಗಳು ಹಾಗೂ ದೇಶದ ಪರಮೋಚ್ಚ ಬ್ಯಾಂಕ್ ಆರ್‌ಬಿಐ, ಈಗಾಗಲೇ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬೇಕೆಂದು ಶಿಫಾರಸು ಮಾಡಿವೆ. ದೇಶದಲ್ಲಿರುವ 12 ಸರಕಾರಿ ಬ್ಯಾಂಕ್‌ಗಳ ಪೈಕಿ 5 ಬ್ಯಾಂಕ್‌ಗಳನ್ನು ತನ್ನಲ್ಲೇ ಉಳಿಸಿಕೊಂಡು ಉಳಿದ 7 ಬ್ಯಾಂಕ್‌ಗಳು ಖಾಸಗಿ ತೆಕ್ಕೆಗೆ ನೀಡುವುದು ಕೇಂದ್ರ ಸರಕಾರದ ಲೆಕ್ಕಾಚಾರ. ಹೀಗಾಗಿಯೇ ಬ್ಯಾಂಕುಗಳ ಖಾಸಗಿಕರಣಕ್ಕೆ ರೂಪು ರೇಷೆಗಳು ಸಿದ್ಧವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತವಾಗಿ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ಗಳ ಬಹುತೇಕ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ಎರಡು ಹಂತಗಳಲ್ಲಿ ಬ್ಯಾಂಕುಗಳನ್ನು ವಿಲೀನ ಮಾಡಲಾಗಿದೆ.

ಆದರೆ ಭವಿಷ್ಯದಲ್ಲಿ ಸರ್ಕಾರಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯುವುದಿಲ್ಲವೆಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿಕರಣಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ.