real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

ಕೃಷಿ ಭೂಮಿಯನ್ನು (Agriculture Land), ಭೂ ಪರಿವರ್ತನೆ ಮಾಡದೆ (Agriculture Land Conversion) ಸೈಟುಗಳಾಗಿ ವಿಂಗಡಿಸುವುದು ಈಗ ಅಪರಾಧ. ರಿಯಲ್ ಎಸ್ಟೇಟ್ (Real Estate) ಭಾಷೆಯಲ್ಲಿ ಇದನ್ನು ರೆವಿನ್ಯು ಸೈಟ್ (Revenue Site) ಅಂತ ಕರೆಯುತ್ತಾರೆ. ಇನ್ನು ಮುಂದೆ ಗುಂಟೆ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದ ಸೈಟುಗಳನ್ನು ಕೊಳ್ಳುವುದು ಅಸಾಧ್ಯ. ಏಕೆಂದರೆ, ಸರ್ಕಾರ, ಕೃಷಿ ಭೂಮಿಯನ್ನು ಕತ್ತರಿಸಿ ಈ ರೀತಿ ಸೈಟುಗಳಾಗಿ ವಿಂಗಡಿಸಕೂಡದು ಅಂತ ಹೊಸ ಕಾನೂನು ( real estate 11e sketch) ಮಾಡಿದೆ.

ಮೊನ್ನೆಯಷ್ಟೇ ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ. ಈ ಸಂದರ್ಭದಲ್ಲಿ 11ಇ ಸ್ಕೆಚ್ (11E Sketch) ಅನ್ನೋ ಪದ ಬಹಳ ಸದ್ದು ಮಾಡಿತು. ಕೃಷಿ ಭೂಮಿಯನ್ನು ಮಾರಾಟ ಮಾಡಬೇಕಾದರೆ ಅಥವಾ ಜಮೀನನ್ನು ಕುಟುಂಬದಲ್ಲೇ ವಿಭಾಗ ಮಾಡಿಕೊಳ್ಳಬೇಕಾದರೆ ಈ ನಕ್ಷೆ ಮಾಡಿಸಬೇಕಾಗುತ್ತದೆ. ಈಗ 11ಇ ಸ್ಕೆಚ್ ಬಗ್ಗೆ ತಿಳಿಯೋಣ

1) 11ಇ ಸ್ಕೆಚ್ ಅಂದರೆ ಏನು ?
ಭೂಮಿಯನ್ನು ವಿಭಾಗಿಸಿ, ಇಂತಿಂಥವರಿಗೆ ಇಂತಿಂಥ ಜಾಗ ಅಂತ ಗಡಿಯನ್ನು ಗುರುತಿಸಲು ಈ ಸ್ಕೆಚ್ ಮಾಡಿಸುತ್ತಾರೆ. ಬಹುತೇಕ ಭೂಮಿಯನ್ನು ಮಾರಾಟ ಮಾಡಲು ಅಥವಾ ಇದ್ದ ಜಮೀನನ್ನು ತಮ್ಮಲ್ಲೇ ವಿಭಾಗ ಮಾಡಿಕೊಳ್ಳುವಾಗಲೂ ಈ ಸ್ಕೆಚ್ ಬೇಕೇಬೇಕು.

2) ಮಾರಾಟ ಮಾಡಲು ಈ ಸ್ಕೆಚ್ ಯಾವರೀತಿ ಉಪಯೋಗ?
ಉದಾಹರಣೆಗೆ, ನಿಮಲ್ಲಿ ಒಂದು ಎಕರೆ ಜಮೀನಿದೆ ಅಂತಿಟ್ಟುಕೊಳ್ಳಿ. ಇದರಲ್ಲಿ ಇಪ್ಪತ್ತು ಗುಂಟೆಯನ್ನು ಮಾರಾಟ ನಿರ್ಧರಿಸಿದ್ದೀರಿ. ರೆವಿನ್ಯು ಇಲಾಖೆಯಲ್ಲಿ ಅರ್ಜಿಕೊಟ್ಟರೆ, ನಿಮ್ಮ ಒಂದು ಎಕರೆ ಜಮೀನಲ್ಲಿ 20 ಗುಂಟೆಯನ್ನು ತುಂಡು ಮಾಡಿ, ಅದಕ್ಕೆ ಪ್ರತ್ಯೇಕ ಸ್ಕೆಚ್ ಮಾಡಿ, ಅದನ್ನು ಕೊಳ್ಳುವವರ ಹೆಸರಲ್ಲಿ ಕೊಡುತ್ತಾರೆ. ಉಳಿಕೆ 20 ಗುಂಟೆ ಜಮೀನು ಮೂಲ ಮಾಲೀಕನ ಹೆಸರಲ್ಲೇ ಇರುತ್ತದೆ.

3) ಅಂದರೆ, ವ್ಯಾಪಾರ ಮೊದಲೇ ಜಮೀನು ಕೊಳ್ಳುವವರ ಹೆಸರಿಗೆ ಹೋಗುತ್ತಾ ?
ಇಲ್ಲ, ಅರ್ಜಿ ಹಾಕಿದನಂತರ 30 ದಿನ ಸ್ಕೆಚ್ ಮಾಡಲು ಸಮಯ ಇರುತ್ತದೆ. 7 ದಿನದಲ್ಲಿ ಕೊಳ್ಳುವ ಮತ್ತು ಮಾರುವ ಇಬ್ಬರಿಗೂ ರೆವಿನ್ಯುಇಲಾಖೆಯಿಂದ ನೋಟಿಸ್ ಬರುತ್ತದೆ. ಇದರ ಆಧಾರದ ಮೇಲೆ ಸ್ಕೆಚ್ ಮಾಡುವುದು. ಸ್ಕೆಚ್ ಕೊಳ್ಳುವವರ ಹೆಸರಿಗೆ ಮಾಡಿದಾಕ್ಷಣ ಮಾಲೀಕತ್ವ ಅವರ ಹೆಸರಿಗೆ ಹೋಗುವುದಿಲ್ಲ. ಇದಕ್ಕೆ 60 ದಿನಗಳ ಸಮಯ ಇರುತ್ತದೆ. ಅಷ್ಟರಲ್ಲಿ ಆತ ಜಮೀನನ್ನು ಕೊಂಡುಕೊಳ್ಳದೇ ಹೋದರೆ ಸ್ಕೆಚ್ ಅಪಮೌಲ್ಯಗೊಳ್ಳುತ್ತದೆ.

4) 60 ದಿನ ಆದಮೇಲೆ ಮತ್ತೆ ಸ್ಕೆಚ್ ಪ್ರಯೋಜನಕ್ಕೆ ಬರುವುದಿಲ್ಲವೇ ?
ಖಂಡಿತ ಇಲ್ಲ, 60 ದಿನ ದಾಟಿದ ನಂತರ, ಸಹಾಯಕ ಭೂ ದಾಖಲಾತಿ (ಏಡಿಎಲ್ ಆರ್ ) ಅಧಿಕಾರಿಗೆ ಅರ್ಜಿ ಕೊಡಬೇಕು. ಅವರು ಕಾಲಾವಧಿ ಮುಗಿದಿರುವ ಸ್ಕೆಚ್ ಅನ್ನು ಕಂಪ್ಯೂಟರ್ ನಲ್ಲಿ ಮತ್ತೆ ತೆರೆಯಲು ಅವಕಾಶ ಕೊಡುತ್ತಾರೆ. ಇದಾಗಿ 30 ದಿನದೊಳಗೆ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.

5) ಸ್ಕೆಚ್ ಹೇಗೆ ಕೆಲಸ ಮಾಡುತ್ತದೆ ?
ನೀವು ಅರ್ಜಿ ಕೊಟ್ಟಾಕ್ಷಣ ಅದು ನೇರವಾಗಿ ಭೂಮಿ ತಂತ್ರಾಂಶದಲ್ಲಿ ನಮೂದಾಗಿ, ಆನಂತರ ನೋಂದಣಿಗೆ ನೆರವಾಗುವ ಕಾವೇರಿ ತಂತ್ರಾಂಶಕ್ಕೆ ರವಾನೆಯಾಗುತ್ತದೆ. ರೆವಿನ್ಯು ಭಾಷೆಯಲ್ಲಿ ಇದನ್ನು ಚೆಕ್ ಲಿಸ್ಟ್ ಅಂತ ಕರೆಯುತ್ತಾರೆ. ಕಾವೇರಿ ತಂತ್ರಾಂಶದಲ್ಲಿ ನಮೂದಾದ ಮೇಲೆಯೇ ಸಬ್ ರಿಜಿಸ್ಟ್ರಾರ್ ಜಮೀನು ನೋಂದಣಿ ಮಾಡಿಕೊಡುವುದು. ನೀವು 60 ದಿನದನಂತರ ಬಂದರೆ, ಕಾವೇರಿ ತಂತ್ರಾಂಶದಲ್ಲಿ ನಮೂದಾಗಿರುವ 11ಇಸ್ಕೆಚ್ ತನ್ನಿಂದ ತಾನೇ ಅಳಿಸಿಹೋಗಿರುತ್ತದೆ.

6) ಇವೆಲ್ಲ ಸರಿ, 11ಇ ಸ್ಕೆಚ್ ಬೇಕು ಅಂದರೆ ಯಾರನ್ನು ಕೇಳಬೇಕು?
ಸ್ಥಳೀಯ ನಾಡ ಕಚೇರಿ ಅಥವಾ ತಾಲೂಕ್ ಕಚೇರಿಯಲ್ಲಿರುವ ಎಡಿ ಎಲ್ ಆರ್ ಅವರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ಜೊತೆಗೆ ನಿಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿಯನ್ನು ಲಗತ್ತಿಸಬೇಕು. ಎಕರೆಗೆ ಇಷ್ಟು ಅಂತ ಫೀ ನಿಗದಿ ಮಾಡಿರುತ್ತಾರೆ. ಅದರ ಆಧಾರದ ಮೇಲೆ ಸರ್ಕಾರಿ ಫೀ ಕಟ್ಟಬೇಕಾಗುತ್ತದೆ.

7) ಹೊಸ ಕಾನೂನು ಏನು ಹೇಳುತ್ತದೆ?
ರಾಜ್ಯಸರ್ಕಾರ, ಸಣ್ಣ ಹಿಡುವಳಿದಾರರನ್ನು ರಿಯಲ್ ಎಸ್ಟೇಟ್ ಮಾಫಿಯಾದಿಂದ ರಕ್ಷಿಸಲು ಹೊಸ ಕಾನೂನಿನ ಮಾಡಿದೆ. ಅದರ ಪ್ರಕಾರ, 5 ಗುಂಟೆಗಿಂತ ಕಡಿಮೆ ಇರುವ ಕೃಷಿ ಭೂಮಿಯನ್ನು ಮಾರಾಟಮಾಡುವಂತಿಲ್ಲ. ಐದು ಗುಂಟೆ ಒಳಗಿನ ಭೂಮಿಗೆ 11 ಇ ಸ್ಕೆಚ್ ಕೂಡ ಸಿದ್ಧಮಾಡಿಕೊಡುವಂತಿಲ್ಲ. ಒಂದು ಪಕ್ಷ ಉದ್ದೇಶ ಪೂರ್ವಕವಾಗಿ ತುಂಡು ಭೂಮಿಯನ್ನು ಮಾರಾಟ ಮಾಡುವುದಾದರೆ, ಅದು ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95ರ ಸ್ಪಷ್ಟ ಉಲ್ಲಂಘನೆ ಆಗಲಿದೆ. ತುಂಡು ಭೂಮಿಯಲ್ಲಿ ಕೃಷಿ ಮಾಡಲು ಆಗುವುದಿಲ್ಲ.

ಬರಹ: ಕಟ್ಟೆ ಗುರುರಾಜ್
ಹಿರಿಯ ಪತ್ರಕರ್ತರು

ಇದನ್ನೂ ಓದಿ: Google Map Without Internet : ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು ! ಅದು ಹೇಗೆ ಎಂಬ ಮಾಹಿತಿ ತಿಳಿಯಿರಿ

ಇದನ್ನೂ ಓದಿ: e-KYC ಎಂದರೇನು? ಸರಳವಾಗಿ ಇದನ್ನು ಪಡೆಯುವುದು ಹೇಗೆ?

(Real Estate 11e Sketch in Karnataka Real Estate must know things before buy site)

Comments are closed.