‘ಜಯಂ’ ತೆಲುಗು, ತಮಿಳು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಚಿತ್ರ. 2002ರಲ್ಲಿ ತೆಲುಗಿನಲ್ಲಿ ತೆರೆ ಕಂಡಿದ್ದ ಜಯಂ ಚಿತ್ರ ತಮಿಳು ಭಾಷೆಗೂ ರಿಮೇಕ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಆದ್ರೀಗ ಬರೋಬ್ಬರಿ 18 ವರ್ಷಗಳ ನಂತರ ಕನ್ನಡಕ್ಕೆ ರಿಮೇಕ್ ಆಗ್ತಿದೆ.

ಸಾಮಾನ್ಯವಾಗಿ ಸಿನಿಮಾವೊಂದು ಹಿಟ್ ಆದರೆ, ಮರುವರ್ಷ ಆ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗೋದು ವಾಡಿಕೆ. ಆದರೆ ಕೆಲವು ಸಿನಿಮಾಗಳು ತಡವಾಗಿ ಬೇರೆ ಭಾಷೆಗೆ ರಿಮೇಕ್ ಆಗುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಸೇರಿರುವುದೇ ಜಯಂ. ನಿತಿನ್ ಮತ್ತು ಸದಾ ಮೊದಲ ಬಾರಿಗೆ ನಟಿಸಿದ್ದ ಜಯಂ ಚಿತ್ರ ಆ ಕಾಲಕ್ಕೆ ಭರ್ಜರಿ ಹಿಟ್ ಆಗಿತ್ತು. ಆರ್.ಪಿ.ಪಟ್ನಾಯಕ್ ಸಂಗೀತ ಜನರಿಗೆ ಬಹು ಇಷ್ಟವಾಗಿದ್ದವು. ತೆಲುಗಿನ ಚಿತ್ರಮಂದಿರಗಳೆಲ್ಲಾ ತುಂಬಿದ ಪ್ರದರ್ಶನವನ್ನು ಕಂಡಿದ್ದವು.

ಚಿತ್ರ ಸೂಪರ್ ಹಿಟ್ ಆಗುತ್ತಲೇ ತಮಿಳು ಭಾಷೆಗೂ ಜಯಂ ಹೆಸರಿನಲ್ಲಿಯೇ ರಿಮೇಕ್ ಆಗಿತ್ತು. ನಟ ರವಿ ನಟಿಸಿದ್ದು, ಚಿತ್ರ ತಮಿಳು ಚಿತ್ರರಂಗದಲ್ಲಿಯೂ ಹೊಸ ದಾಖಲೆಯನ್ನೇ ನಿರ್ಮಿಸಿತ್ತು. ಆದ್ರೀಗ ಜಯಂ ಕನ್ನಡಕ್ಕೆ ರಿಮೇಕ್ ಆಗ್ತಿದೆ ಅನ್ನೋ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಪ್ರವೀಣ್ ಅನ್ನುವವರು ಈಗಾಗಲೇ ಜಯಂ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ಉತ್ಸಾಹ ತೋರಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರೋ ಪ್ರವೀಣ್ ಜಯಂ ಮೂಲಕ ಸ್ಯಾಂಡಲ್ ವುಡ್ ಹೀರೋ ಆಗಿ ಮಿಂಚಲು ತಯಾರಿ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಈ ವರ್ಷವೇ ಜಯಂ ಸಿನಿಮಾ ಸೆಟ್ಟೇರಲಿದೆ ಅಂತಿದೆ ಮೂಲಗಳು.