ತಮಿಳುನಾಡಿನ ರಾಜಕಾರಣದಲ್ಲಿ ಸೂಪರ್ ಸ್ಟಾರ್ ಶಕೆಯೊಂದನ್ನು ಮೂಡಿಸುವ ಭರವಸೆ ಹುಟ್ಟುಹಾಕಿದ್ದ ಸೂಪರ್ ಸ್ಟಾರ್, ತಲೈವಾ ರಾಜಕೀಯದಿಂದ ದೂರ ಉಳಿಯುವ ಶಾಕಿಂಗ್ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ.
ಹೊಸ ಪಕ್ಷ ಘೋಷಿಸಿ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಘೋಷಣೆ ಮಾಡಿದ್ದ ತಲೈವಾ ರಜನಿಕಾಂತ್, ಪಕ್ಷ ಘೋಷಿಸಲು ನಿಗದಿ ಪಡಿಸಿದ್ದ ಎರಡು ದಿನಗಳ ಮೊದಲು ಅನಾರೋಗ್ಯದ ಕಾರಣ ಮುಂದಿಟ್ಟು ರಾಜಕಾರಣಕ್ಕೆ ಬರುವುದಿಲ್ಲ ಎನ್ನುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಅಭಿಮಾನಿಗಳಿಗೆ ಸುದೀರ್ಘ ಮೂರು ಪುಟಗಳ ಪತ್ರ ಬರೆದಿರುವ ರಜನಿಕಾಂತ್ ನಾನು ರಾಜಕೀಯ ಪಕ್ಷ ಕಟ್ಟಲು ಸಾಧ್ಯವಾಗುತ್ತಿಲ್ಲ.ಇದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ, 2021 ರ ಜನವರಿ 1 ನೇ ತಾರೀಕಿನಿಂದ ರಜನಿಕಾಂತ್ ಸಕ್ರಿಯ ರಾಜಕಾರಣ ಆರಂಭಿಸಬೇಕಿತ್ತು. ಡಿಸೆಂಬರ್ 31 ರ ಮಧ್ಯರಾತ್ರಿ ಪಕ್ಷ ಘೋಷಿಸುವುದಾಗಿ ಹೇಳಿದ್ದ ರಜನಿಕಾಂತ್ ಈಗಾಗಲೇ ಚುನಾವಣಾ ಆಯೋಗಕ್ಕೆ ಪಕ್ಷದ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು.
ಪಕ್ಷಕ್ಕೆ ಮಕ್ಕಳ್ ಸೇವೆ ಕಚ್ಚಿ ಎಂದು ಹೆಸರಿಟ್ಟಿದ್ದು, ಪಕ್ಷಕ್ಕೆ ಅಟೋ ಸಿಂಬಲ್ ಸಿಕ್ಕಿದೆ ಎಂದು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೇ ರಜನಿಕಾಂತ್ ಪಕ್ಷ ಆರಂಭಿಸಿ ಈಗಾಗಲೇ ರಾಜಕೀಯದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟ ಕಮಲ್ ಹಾಸನ್ ಪಕ್ಷದೊಂದಿದೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದೆಲ್ಲ ಲೆಕ್ಕಾಚಾರ ಹಾಕಲಾಗಿತ್ತು.
ಆದರೆ ರಜನಿಕಾಂತ್ ರಾಜಕೀಯ ಬದುಕಿಗೆ ಅನಾರೋಗ್ಯ ಅಡ್ಡಿಯಾಗಿದೆ. ಕೆಲ ತಿಂಗಳ ಹಿಂದೆ ಕಿಡ್ನಿ ಸೋಂಕಿಗೆ ತುತ್ತಾಗಿದ್ದ ರಜನಿಕಾಂತ್ ಕೆಲ ದಿನಗಳ ಹಿಂದೆಯಷ್ಟೇ ಶೂಟಿಂಗ್ ಸೆಟ್ ನಲ್ಲಿ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಮೊನ್ನೆಯಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಮನೆಗೆ ಮರಳಿದ ಬಳಿಕ ಆಪ್ತರು ಹಾಗೂ ಕುಟುಂಬದವರ ಜೊತೆ ಚರ್ಚಿಸಿ ಸಧ್ಯ ಆರೋಗ್ಯದ ಕಾರಣಕ್ಕೆ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದು, ಟ್ವೀಟ್ ಮೂಲಕ ಈ ನಿರ್ಧಾರ ಪ್ರಕಟಿಸಿದ್ದಾರೆ. ಅಭಿಮಾನಿಗಳಿಗೆ ತಲೈವಾ ಈ ಘೋಷಣೆ ಆಘಾತ ತಂದಿದೆ.