ಚೆನ್ನೈ : ಸ್ಯಾಂಡಲ್ ವುಡ್ ನಲ್ಲಿ ಸೂರ್ಯವಂಶ, ನಾಗಮಂಡಲ ಸಿನಿಮಾಗಳಲ್ಲಿ ನಟಿಸಿದ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ನಟಿಯನ್ನು ಅಡಿಯಾರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ರಾಜಕಾರಣಿ ಸೀಮನ್ ವಿರುದ್ದ ಇತ್ತೀಚಿಗೆ ನಟಿ ವಿಜಯಲಕ್ಷ್ಮೀ ಗಂಭೀರ ಆರೋಪಗಳನ್ನು ಮಾಡಿದ್ದರು. ಸೀಮನ್ ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದಿದ್ದರು. ಇದರ ಬೆನ್ನಲ್ಲೇ ನಟಿ ವಿಜಯಲಕ್ಷ್ಮೀ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು. ನನ್ನ ತಾಯಿ ಮತ್ತು ಸಹೋದರಿಯ ಕಾರಣಕ್ಕೆ ಬದುಕಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದರೆ ಕಳೆದ ನಾಲ್ಕು ತಿಂಗಳಿನಿಂದಲೂ ತಾನು ತೀವ್ರ ಒತ್ತಡದಲ್ಲಿದ್ದೇನೆ ಎನ್ನುವುದಾಗಿಯೂ ಹೇಳಿಕೊಂಡಿದ್ದರು.

ತಾನು ಆತ್ಮಹತ್ಯೆಗೆ ಯತ್ನಿಸುವ ಮುನ್ನವೇ ವಿಡಿಯೋ ಚಿತ್ರೀಕರಿಸಿರುವ ವಿಜಯಲಕ್ಷ್ಮೀ ನಾನು ಈಗಾಗಲೇ ನನ್ನ ಒಂದೆರಡು ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ, ಆದ್ದರಿಂದ ಸ್ವಲ್ಪ ಸಮಯದಲ್ಲಿ ನಾನು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ ಮತ್ತು ಕೆಲವೇ ಗಂಟೆಗಳಲ್ಲಿ ನಾನು ಸಾಯುತ್ತೇನೆ.
ನಾನು ಕರ್ನಾಟಕದಲ್ಲಿ ಹುಟ್ಟಿದ ಕಾರಣ ವಿಡಿಯೋ ನೋಡುವ ಅಭಿಮಾನಿಗಳಿಗೆ ನಾನು ತುಂಬಾ ಹಿಂಸೆ ನೀಡಿದ್ದೇನೆ ಎಂದು ಹೇಳಲು ಬಯಸುತ್ತೇನೆ.

ನನ್ನಿಂದ ಮುಂದಿನ ದಿನಗಳಲ್ಲಿ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿ ವಿಜಯಲಕ್ಷ್ಮೀ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.