ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಕಾರ್ಯಕ್ರಮವು ಯಶಸ್ವಿ 1000ನೇ ಕಂತನ್ನು ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ (Amitabh Bachchan) ತಾವು ಯಾಕೆ ಕೆಬಿಸಿಯನ್ನು ಆಯ್ಕೆ ಮಾಡಿಕೊಂಡೆ ಎಂಬುದನ್ನು ರಿವೀಲ್ ಮಾಡಿದ್ದಾರೆ. 2000ನೇ ಇಸ್ವಿಯಲ್ಲಿ ನನಗೆ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ನಾನು ಕೆಬಿಸಿ ನಿರೂಪಣೆ ಮಾಡುವ ನಿರ್ಧಾರ ಕೈಗೊಂಡೆ ಎಂದಿದ್ದಾರೆ.
1000ನೇ ಕಂತಿಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಅಮಿತಾಬ್ ಪುತ್ರಿ ಶ್ವೇತಾ ಹಾಗೂ ಅವರ ಪುತ್ರಿ ನವ್ಯಾ ನವೇಲಿ ನಂದಾ ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಕಾರ್ಯಕ್ರಮದಲ್ಲಿ ಶ್ವೇತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಗ್ ಬಿ, ಅಂದಹಾಗೆ ಈ ಶೋಗೆ ಇದೀಗ 21 ವರ್ಷ ಪೂರ್ಣಗೊಂಡಿದೆ. 2000ನೇ ಇಸ್ವಿಯಲ್ಲಿ ಇದರ ಆರಂಭವಾಗಿತ್ತು. ಆ ಸಮಯದಲ್ಲಿ ನಮಗೆ ಈ ಶೋ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎಂಬ ಊಹೆ ಇರಲಿಲ್ಲ. ಅನೇಕರು ನನಗೆ ನೀವು ಬೆಳ್ಳಿ ತೆರೆಯಿಂದ ಕಿರುತೆರೆಗೆ ಏಕೆ ಹೋಗುತ್ತಿದ್ದೀರಿ ಎಂದು ಕೇಳಿದ್ದರು. ಇದರಿಂದ ನಿಮ್ಮ ಇಮೇಜ್ ಹಾಳಾಗುತ್ತೆ ಎಂದೂ ಅನೇಕರು ಕಳವಳ ಹೊರಹಾಕಿದ್ದರು.
ಆದರೆ ನನ್ನ ಪರಿಸ್ಥಿತಿ ಬೇರೆಯದ್ದೇ ಇತ್ತು. ನನಗೆ ಆಗ ಸಿನಿಮಾಗಳಲ್ಲಿ ಅವಕಾಶಗಳು ನಿಂತು ಹೋಗಿತ್ತು. ಹೀಗಾಗಿ ಈ ಶೋಗೆ ನಡೆಸಿಕೊಡಲು ಒಪ್ಪಿದೆ. ಈ ಕಾರ್ಯಕ್ರಮಕ್ಕೆ ಸಿಕ್ಕ ಸ್ಪಂದನೆಯು ನನ್ನ ಜಗತ್ತನ್ನೇ ಬದಲಾಯಿಸಿತು ಎಂದು ಹೇಳಿದ್ರು. ಈ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ಸ್ಪರ್ಧಿಯಿಂದಲೂ ನಾನು ಏನನ್ನಾದರೂ ಕಲಿತಿದ್ದೇನೆ ಎಂದು ಅಮಿತಾಬ್ ಹೇಳಿದ್ರು. ಅಮಿತಾಬ್ರ ಈ ಮಾತುಗಳಿಗೆ ಪ್ರೇಕ್ಷಕರು ಸೇರಿದಂತೆ ಶ್ವೇತಾ ಹಾಗೂ ನವ್ಯಾ ಚಪ್ಪಾಳೆಯನ್ನು ಹೊಡೆದರು. ಅಮಿತಾಬ್ ಬಚ್ಛನ್ ಮಾತಿನ ಬಳಿಕ ಅವರ ಕೆಬಿಸಿ ಜರ್ನಿಯನ್ನು ವಿಟಿ ಮೂಲಕ ಪ್ರದರ್ಶಿಸಲಾಯ್ತು. ವಿಡಿಯೋ ನೋಡಿದ ಅಮಿತಾಬ್ ಕಣ್ಣಂಚಲ್ಲಿ ನೀರು ಜಿನುಗಿತ್ತು. ಕೆಬಿಸಿ 1000ನೇ ಎಪಿಸೋಡ್ ಸಂಪೂರ್ಣ ಭಾವುಕ ಕ್ಷಣವಾಗಿ ಬದಲಾಗಿತ್ತು.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಸದ್ಯ 13ನೇ ಆವೃತ್ತಿಯನ್ನು ನಡೆಸುತ್ತಿದೆ. ಅನಾರೋಗ್ಯದ ಕಾರಣದಿಂದಾಗಿ ಅಮಿತಾಬ್ 3ನೇ ಸೀಸನ್ನಿಂದ ಹೊರ ನಡೆದಿದ್ದರು. ಹಾಗೂ ಈ ಆವೃತ್ತಿಯನ್ನು ಶಾರೂಕ್ ಖಾನ್ ನಡೆಸಿಕೊಟ್ಟಿದ್ದರು. ಇದನ್ನು ಹೊರತುಪಡಿಸಿ ಮಿಕ್ಕೆಲ್ಲ ಆವೃತ್ತಿಯನ್ನು ಅಮಿತಾಬ್ ನಡೆಸಿಕೊಟ್ಟಿದ್ದಾರೆ. ಸೀಸನ್ 1 ರಿಂದ 6ರರವರೆಗೆ ವಿಜೇತರಿಗೆ 1 ಕೋಟಿ ರೂಪಾಯಿಯನ್ನು ನೀಡಲಾಗುತ್ತಿತ್ತು. ಆದರೆ ಸೀಸನ್ 7ರಿಂದ ಅಂದರೆ 2013ರಿಂದ 7 ಕೋಟಿ ರೂಪಾಯಿ ಹಣದವರೆಗೂ ಸ್ಪರ್ಧಿ ಆಟವಾಡಬಹುದಾಗಿದೆ.
ಇದನ್ನು ಓದಿ : The Omicron Variant : ಒಮಿಕ್ರಾನ್ ರೂಪಾಂತರಿ ಹೆಸರಿನಲ್ಲಿ ಸಿನಿಮಾ ತೆರೆಕಂಡಿತ್ತೇ..? ಫ್ಯಾಕ್ಟ್ಚೆಕ್ನಲ್ಲಿ ಬಯಲಾಯ್ತು ಅಸಲಿಯತ್ತು
Amitabh Bachchan breaks down, reveals he was compelled to host Kaun Banega Crorepati in 2000: ‘Wasn’t getting films’