ಡ್ರಗ್ಸ್ ನಶೆಯಲ್ಲಿ ಚಿರು ಹೆಸರು ಕೇಳಿಬಂದಿದ್ಯಾಕೆ ? ಯಾರಿಗೂ ಬರಬಾರದು ಮೇಘನಾ ರಾಜ್ ಸ್ಥಿತಿ

0

ಚಿರಂಜೀವಿ ಸರ್ಜಾ. ಸ್ಯಾಂಡಲ್ ವುಡ್ ಯುವ ನಟ. ಸರ್ಜಾ ಕುಟುಂಬದ ಕುಡಿ. ಚಿರಂಜೀವಿ ಸರ್ಜಾ ಅಕಾಲಿಕ ನಿಧನದಿಂದ ಕುಟುಂಬಸ್ಥರು ಇನ್ನೂ ಹೊರಬಂದಿಲ್ಲ. ಅಷ್ಟರಲ್ಲೇ ಚಿರಂಜೀವಿ ಸರ್ಜಾ ಸಾವಿನ ಕುರಿತು ಅನುಮಾನವೆದ್ದಿದೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಡಿಸಿ ಆ ಒಂದು ಬಾಂಬ್ ಇದೀಗ ಸರ್ಜಾ ಕುಟುಂಬಸ್ಥರಿಗೆ ಕಣ್ಣೀರು ತರಿಸುತ್ತಿದ್ದು, ಪತ್ನಿ ಮೇಘನಾ ರಾಜ್ ಪತಿಯ ಹೆಸರಿಗೆ ಕಳಂಕ ತರಬೇಡಿ ಅಂತಾ ಮನವಿ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ವಿವಾದಗಳೇ ಇಲ್ಲದಂತೆ ಬೆಳೆದಿದ್ದ ಚಿರಂಜೀವಿ ಸರ್ಜಾ ಸಾವಿನ ಬಳಿಕ ವಿವಾದವೊಂದು ಸೃಷ್ಟಿಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿಯೆಬ್ಬಿಸಿರೋ ಡ್ರಗ್ಸ್ ಮಾಫಿಯಾದ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಸಾವಿನ ಸಂದರ್ಭದಲ್ಲಿ ಯುವನಟನ ಮರಣೋತ್ತರ ಪರೀಕ್ಷೆಯನ್ನು ಯಾಕೆ ನಡೆಸಿಲ್ಲ ಅಂತಾ ಪ್ರಶ್ನಿಸಿದ್ದರು.

ಮಾತ್ರವಲ್ಲ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ಬಯಲಾಗಿತ್ತು. ಅಂತಾನೂ ಹೇಳುವ ಮೂಲಕ ಪರೋಕ್ಷವಾಗಿ ಚಿರು ಸಾವಿನಲ್ಲಿ ಅನುಮಾನ ಮೂಡುವಂತೆ ಮಾಡಿದ್ದರು. ಇದರ ಬೆನ್ನಲ್ಲೇ ಚಿರು ಕುಟುಂಬಸ್ಗರು ಇಂದ್ರಜಿತ್ ಲಂಕೇಶ್ ಆರೋಪದ ಕುರಿತು ಸ್ಪಷ್ಟನೆ ಕೊಟ್ಟಿದ್ದರು. ಪತ್ನಿ ಮೇಘನಾ ಕಣ್ಣೀರು ಸುರಿಸಿದ್ರೆ, ತಮ್ಮ ಧ್ರುವ ಸರ್ಜಾ ಅಣ್ಣನ ವಿಚಾರ ಕೆದಕಿದ್ದಕ್ಕೆ ಕಿಡಿಕಾರಿದ್ದರು.

ಅಷ್ಟಕ್ಕೂ ಡ್ರಗ್ಸ್ ಮಾಫಿಯಾದ ಬೆನ್ನಲ್ಲೇ ಚಿರು ಸಾವಿನ ಬಗ್ಗೆ ಅನುಮಾನ ಮೂಡುವುದಕ್ಕೆ ಕಾರಣವಾಗಿದ್ದಾದ್ರೂ ಏನು ? ಇಂದ್ರಜಿತ್ ಲಂಕೇಶ್ ಹೇಳುವಂತೆ ಮನೆಯವರು ಚಿರು ಸಾವಿನ ಪೋಸ್ಟ್ ಮಾರ್ಟಮ್ ಮಾಡದಂತೆ ಒತ್ತಡ ಹೇರಿದ್ರಾ ? ಚಿರು ಸಾವಿಗೂ ಡ್ರಗ್ಸ್ ನಶೆಗೂ ಸಂಬಂಧವಿದ್ಯಾ ? ಹೀಗೆ ಹತ್ತಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ. ಇಂದ್ರಜಿತ್ ಲಂಕೇಶ್ ಎಲ್ಲಾ ವಿಚಾರಗಳನ್ನು ಪರೋಕ್ಷವಾಗಿ ಹೇಳಿದ್ದಾರೆಯೇ ವಿನಃ ಚಿರು ಡ್ರಗ್ಸ್ ಸೇವನೆ ಮಾಡಿದ್ದಾರಾ ? ಅದೇ ಕಾರಣದಿಂದಲೇ ಚಿರು ಬಾರದ ಲೋಕಕ್ಕೆ ಪಯಣಿಸಿದ್ದಾರಾ ಅನ್ನೋದ್ರ ಬಗ್ಗೆ ಸಷ್ಟನೆ ಕೊಟ್ಟಿಲ್ಲ. ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವಂತೆ ಮಾತುಗಳನ್ನಾಡಿದ್ದಾರೆ.

ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುವ ಕನಸು ಕಂಡಿದ್ದ ಚಿರಂಜೀವಿ ಸರ್ಜಾ ಸಾವು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಲಕ್ಷಾಂತರ ಅಭಿಮಾನಿಗಳಿಗೂ ನೋವನ್ನು ತರಿಸಿತ್ತು. ಇಂದಿಗೂ ಅಭಿಮಾನಿಗಳು ಚಿರುವನ್ನು ನೆನೆದು ಕಣ್ಣೀರು ಸುರಿಸುತ್ತಿದ್ದಾರೆ. ಮೇಘನಾ ರಾಜ್ ಒಡಲಲ್ಲಿ ಚಿರು ಹುಟ್ಟಿ ಬರಲಿ ಅಂತಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ನಡುವಲ್ಲೇ ಕೇಳಿಬಂದ ಆರೋಪ ನಿಜಕ್ಕೂ ಬೇಸರ ಮೂಡಿಸಿದೆ.

ಮೇಘನಾ ಸರ್ಜಾ ಅವರನ್ನು 10 ವರ್ಷಗಳ ಪ್ರೀತಿಸಿ ಮದುವೆಯಾದವರು ಚಿರಂಜೀವಿ ಸರ್ಜಾ.ಅದ್ರಲ್ಲೂ ಸರ್ಜಾ ಕುಟುಂಬದಲ್ಲಿ ಬೆಳೆದು ಬಂದ ಚಿರಂಜೀವಿ ಅವರಿಗೆ ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವಿದೆ ಎಂದ್ರೆ ಯಾರೇ ಆಗಲಿ ಅಷ್ಟು ಸುಲಭಕ್ಕೆ ನಂಬೋದಕ್ಕೆ ಸಾಧ್ಯವಿಲ್ಲ. ಆದರೆ ಚಿರಂಜೀವಿ ಸರ್ಜಾ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾವನಪ್ಪಿರೋದು ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ಆರೋಗ್ಯ ಬಗೆಗಿನ ನಿರ್ಲಕ್ಷ್ಯ, ಅತೀಯಾಗಿ ಜಿಮ್ ಮಾಡುತ್ತಿದ್ದ ಚಿರು ಲಾಕ್ ಡೌನ್ ಸಂರ್ಭದಲ್ಲಿ ಜಿಮ್ ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿಯೇ ಚಿರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಯಾರೇ ಸಾವನ್ನಪ್ಪಿದ್ದರೂ ಕೂಡ ಅನುಮಾನ ಮೂಡುವುದು ಸಹಜ. ಆದರೆ ಚಿರು ವಿರುದ್ದ ಕೇಳಿ ಬಂದಿರುವ ಆರೋಪ ನಿಜವಾಗಿದೆ ಅಂತಾ ಯಾರೂ ಹೇಳುತ್ತಿಲ್ಲ. ಸ್ನೇಹಿತರು ಕೂಡ ಚಿರು ಡ್ರಗ್ಸ್ ಸೇವನೆ ಮಾಡ್ತಾ ಇರಲಿಲ್ಲ ಅಂದಿದ್ದಾರೆ. ಅದ್ರಲ್ಲೂ ಇಂದ್ರಜಿತ್ ಲಂಕೇಶ್ ಹೇಳಿರುವ ಆ ಮಾತು ಇದೀಗ ಮನೆ ಮಗನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಆಘಾತವನ್ನು ಮೂಡಿಸಿದೆ.

ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಮೇಘನಾ ಸರ್ಜಾ ಸ್ಥಿತಿ ನಿಜಕ್ಕೂ ಕಣ್ಣೀರು ತರಿಸುತ್ತದೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳಾಗಿರೋ ಮೇಘನಾ ರಾಜ್ ಕನ್ನಡ, ಮಲಯಾಲಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು. ಮನಮೆಚ್ಚಿದ ಗೆಳೆಯನ ಕೈಹಿಡಿದು ಸುಂದರ ಸಂಸಾರದ ಕನಸು ಕಂಡಿದ್ದರು. ಆದರೆ ಚಿರು ಮದುವೆಯಾದ ಸ್ವಲ್ಪ ಸಮಯದಲ್ಲಿ ಮೇಘನಾ ಅವರನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾರೆ.

ಒಂದೆಡೆ ಚಿರು ಅಗಲಿಕೆಯ ನೋವು. ಇನ್ನೊಂದೆಡೆ ತುಂಬು ಗರ್ಭಿಣಿ. ಈ ನಡುವಲ್ಲೇ ಡ್ರಗ್ಸ್ ಮಾಫಿಯಾದಲ್ಲಿ ಚಿರು ಹೆಸರು ಕೇಳಿಬಂದಿರುವುದು ಸಹಜವಾಗಿಯೇ ಮೇಘನಾ ಅವರಿಗೆ ಕಣ್ಣೀರು ತರಿಸಿದೆ. ಹೀಗಾಗಿಯೇ ಮೇಘನಾ ತನ್ನ ಪತಿಯ ಹೆಸರಿಗೆ ಕಳಂಕ ತರಬೇಡಿ. ನನ್ನ ಚಿರು ಯಾವತ್ತೂ ಡ್ರಗ್ಸ್ ದಾಸರಾಗಿರಲಿಲ್ಲ. ಚಿರು ಡ್ರಗ್ಸ್ ಸೇವನೆ ಮಾಡುತ್ತಿರಲಿಲ್ಲ. ಹೀಗಾಗಿ ಅನಗತ್ಯವಾಗಿ ಅವರ ಹೆಸರನ್ನು ಎಳೆದು ತರಬೇಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

ಚಿರು ಸಾವನ್ನಪ್ಪಿ ಎರಡು ತಿಂಗಳ ನಂತರದಲ್ಲಿ ಚಿರು ಸಾವಿನ ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ಚರ್ಚೆಯಾಗ್ತಿದೆ. ಚಿರು ವಿರುದ್ದ ಕೇಳಿ ಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸೋದಕ್ಕೆ ಚಿರು ಇಂದು ನಮ್ಮೊಂದಿಗಿಲ್ಲ. ಸ್ಯಾಂಡಲ್ ವುಡ್ ದಿಗ್ಗಜರು ಕೂಡ ಚಿರು ಬಗ್ಗೆ ಕೆಟ್ಟದಾಗಿ ಮಾತನಾಡೋದು ಬೇಡಾ ಅಂತಾ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಇಂದ್ರಜಿತ್ ಲಂಕೇಶ್ ಚಿರು ವಿಚಾರದಲ್ಲಿ ತನ್ನ ಹೇಳಿಕೆಯನ್ನು ವಾಪಾಸ್ ಪಡೆಯುತ್ತೇನೆ ಅನ್ನುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

ಏನೇ ಆಗಲಿ, ಮೊದಲೇ ಪತಿಯನ್ನು ಕಳೆದುಕೊಂಡು ದುಖಃದಲ್ಲಿರುವ ಮೇಘನಾ ಕಣ್ಣೀರು ಒರಿಸುವ ಕಾರ್ಯವನ್ನು ಮಾಡಬೇಕಾಗಿದೆ. ಅದನ್ನು ಬಿಟ್ಟು ಚಿರು ಹೆಸರನ್ನು ಡ್ರಗ್ಸ್ ನಶೆಯಲ್ಲಿ ಬಳಸುವುದು ಸರಿಯಲ್ಲ.

Leave A Reply

Your email address will not be published.