Chiranjeevi Sarja ಮೊದಲ ವರ್ಷದ ಪುಣ್ಯಸ್ಮರಣೆ….! ಮಗನೊಂದಿಗೆ ಪತಿ ಸಮಾಧಿಗೆ ಪೂಜೆ ಸಲ್ಲಿಸಿದ ಮೇಘನಾ ರಾಜ್….!!

ಸ್ಯಾಂಡಲ್ ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನಕ್ಕೆ ಇಂದಿಗೆ ಒಂದು ವರ್ಷದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಮಾಧಿ ಪೂಜಾ ಕಾರ್ಯ ನೆರವೇರಿಸಿದ್ದಾರೆ. ಕುಟುಂಬದ ಜೊತೆ ತೆರಳಿರುವ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು ಜೊತೆ ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಜೂನ್ 7,2020 ರಂದು ಹೃದಯಾಘಾತದಿಂದ ನಿಧನರಾದ ನಟ ಚಿರು ಸರ್ಜಾ ಅಂತ್ಯಸಂಸ್ಕಾರವನ್ನು ಸಹೋದರ ಧ್ರುವ್ ಸರ್ಜಾಗೆ ಸೇರಿದ ಕನಕಪುರ ರಸ್ತೆಯ ಕಗ್ಗಲಿಪುರ ಸನಿಹದ ನೆಲಗುಳಿಯ ಬೃಂದಾವನ ಫಾರ್ಮಹೌಸ್ ನಲ್ಲಿ ನೆರವೇರಿಸಲಾಗಿತ್ತು.

ಈಗಾಗಲೇ ನೆಲಗುಳಿ ಫಾರ್ಮಹೌಸ್ ನಲ್ಲಿ ಸಮಾಧಿ ನಿರ್ಮಾಣಕ್ಕೂ ನಟ ಹಾಗೂ ಚಿರು ಧ್ರುವ್ ಸರ್ಜಾ ಚಾಲನೆ ನೀಡಿದ್ದಾರೆ. ಈ ಸಮಾಧಿಗೆ ಇಂದು ಸರ್ಜಾ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಚಿರು ಸರ್ಜಾ ಅಜ್ಜಿ ಲಕ್ಷ್ಮೀದೇವಮ್ಮ, ತಂದೆ-ತಾಯಿ, ಸಹೋದರ ಧ್ರುವ್ ಸರ್ಜಾ, ಪತ್ನಿ ಪ್ರೇರಣಾ ಸರ್ಜಾ ಜೊತೆಗೆ ಚಿರು ಪತ್ನಿ ಹಾಗೂ ನಟಿ ಮೇಘನಾ ರಾಜ್ ಕೂಡ ಜ್ಯೂನಿಯರ್ ಚಿರು ಜೊತೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಪೂಜೆ ಬಳಿಕ ಮೇಘನಾ ಚಿರು ಸಮಾಧಿ ಬಳಿಯೇ ಚಿರು ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ಸ್ಮಾರಕದಲ್ಲಿ ಚಿರು ನೆನಪುಗಳನ್ನು ಶಾಶ್ವತಗೊಳಿಸುವುದು ಮತ್ತು ಅಭಿಮಾನಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸೋದು ಸರ್ಜಾ ಕುಟುಂಬ ನಿರ್ಧಾರ. ಮೇಘನಾ ರಾಜ್ ಪುತ್ರನ ಜೊತೆ ಪತಿಯ ಸ್ಮಾರಕಕ್ಕೆ ಪೂಜೆ ಸಲ್ಲಿಸುವಾಗ ಭಾವುಕರಾಗಿದ್ದು, ಪತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ  ಈ ಜೋಡಿ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದ ದಂಪತಿಗಳಿಗೆ ಅನೀರಿಕ್ಷಿತವಾಗಿ ಸಾವಿನ ಆಘಾತಎದುರಾಗಿದ್ದು, 5 ತಿಂಗಳ ಗರ್ಭಿಣಿ ಪತ್ನಿಯನ್ನು ಚಿರು ಅಗಲಿದ್ದರು.  

Comments are closed.