Duniya Vijay Telugu Film : ನಾನೇಕೆ ತೆಲುಗಿನಲ್ಲಿ ನಟಿಸುತ್ತಿದ್ದೇನೆ? ದುನಿಯಾ ವಿಜಯ್ ಉತ್ತರ ಓದಿ

ದುನಿಯಾ ವಿಜಯ್ ತೆಲುಗಿಗೆ ಪಾದಾರ್ಪಣೆ ಮಾಡುವ ಸುದ್ದಿ ಹಳೆಯದು. ಈ ಬಗ್ಗೆ ದುನಿಯಾ ವಿಜಯ್ (Duniya Vijay) ತುಟಕ್ ಪಿಟಕ್ ಅಂದಿರಲಿಲ್ಲ. ತೆರೆಮರೆಯಲ್ಲೆ ಎಲ್ಲವೂ ನಡೆಯುತ್ತಿರುವಾಗ, ಸಮಯ ಬರಲಿ ಇರಿ ಅಂತ ಕಾಲದ ಕಡೆ ಕೈ ತೋರಿಸಿ ಸುಮ್ಮನಿದ್ದರು. ಮೊನ್ನೆ ನಿರ್ದೇಶಕ ಗೋಪಿಚಂದ್ ತಂಡ ಬಾಲಯ್ಯ ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ನಟಿಸುತ್ತಿರುವ ಬಗ್ಗೆ ಘೋಷಣೆ ಮಾಡಿದಾಗಲೂ ವಿಜಯ್ ಬಾಯಿ ತೆರೆಯಲಿಲ್ಲ. ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲಣದಲ್ಲಿ ಶೇರ್ ಮಾಡುವ ಮೂಲಕ ಸಂದೇಶ ರವಾನಿಸಿದ್ದರು. ಆಮೇಲೆ, ಖುದ್ದು ತಾವೇ ಮಾಧ್ಯಮಗಳ ಮುಂದೆ ತಾವೇಕೆ ತೆಲುಗಿನ (Duniya Vijay Telugu Film) ಅವಕಾಶ ಒಪ್ಪಿಕೊಂಡದ್ದು ಅನ್ನೋದನ್ನು ಸವಿವರವಾಗಿ ವಿವರಿಸಿದರು.

‘ನಾನು ಬಾಲಕೃಷ್ಣ ಅವರ ಚಿತ್ರವನ್ನು ಮುಗಿಸುವ ತನಕ ಯಾವುದೇ ಚಿತ್ರ ಒಪ್ಪಿಕೊಳ್ಳಲ್ಲ. ಬೇರೆ ಚಿತ್ರದ ಬಗ್ಗೆ ಯೋಚನೆಯೂ ಮಾಡೋಲ್ಲ. ಕಾರಣ ಇಷ್ಟೇ, ಇಲ್ಲಿ ಪಾತ್ರ ಮಾಡಿದ ನಂತರ, ನನ್ನ ಗೆಟಪ್ ಬದಲಾಗುತ್ತದೆ. ಬೇರೆ ಕಡೆ ಅದೇ ಗೆಟಪ್ ಕಂಡರೆ ಒಂಥರ ರಿವೀಲ್ ಆಗಬಹುದು. ಇದರಿಂದ ಚಿತ್ರಕ್ಕೆ ಅಡಚಣೆಯಾಗಬಹುದು. ಹೀಗಾಗಿ…’
ದುನಿಯಾ ವಿಜಯ್ ಟಾಲಿವುಡ್ ಗೆ ಕಾಲಿಟ್ಟಿದ್ದಕ್ಕೆ ಸಮರ್ಥನೆ ಮಾಡಿಕೊಂಡದ್ದು ಹೀಗೆ.

ವಿಜಯ್ ಏಕೆ ತೆಲುಗು ಚಿತ್ರವನ್ನು ಒಪ್ಪಿಕೊಂಡರು- ಅದಕ್ಕೆ ಅವರ ಉತ್ತರ ಹೀಗಿದೆ. ‘ಇದಕ್ಕೆ ಕಾರಣ ಬಾಲಕೃಷ್ಣ ಮತ್ತು ನಿರ್ದೇಶಕ ಗೋಪಿಚಂದ್. ಗೋಪಿ ಚಂದ್ ಸಲಗ ಸೇರಿದಂತೆ ನನ್ನ ಎಲ್ಲಾ ಚಿತ್ರವನ್ನೂ ನೋಡಿದ್ದಾರೆ. ಹೀಗಾಗಿ, ನನಗಾಗಿ ಒಳ್ಳೆ ಪಾತ್ರ ಸೃಷ್ಟಿಸಿದ್ದಾರೆ. ಬಾಲಕೃಷ್ಣ ಅವರ ಚಿತ್ರದಲ್ಲಿ ಪ್ರತಿ ಪಾತ್ರಕ್ಕೆ ಒಂದು ಸ್ಪೇಸ್ ಇದ್ದೇ ಇರುತ್ತದೆ. ನನ್ನ ಪಾತ್ರಕ್ಕೆ ದೊಡ್ಡ ಫೋರ್ಸ್ ಕೂಡ ಇರುವುದರಿಂದ ಖುಷಿ-ಖುಷಿಯಾಗಿ ನಟಿಸಲು ಒಪ್ಪಿಕೊಂಡಿದ್ದೇನೆ ‘ಅಂದರು.

ವಿಜಯ್ ಪ್ರಕಾರ ಇದೊಂದು ದೊಡ್ಡ ಅವಕಾಶ. ನಟನ ವೃತ್ತಿ ಜೀವನದ ಬಹು ದೊಡ್ಡ ಮೆಟ್ಟಿಲಂತೆ. ಆದರೆ, ಹೀರೋ ಆದವರು ಬೇರೆ ಭಾಷೆಯಲ್ಲಿ ವಿಲನ್ ಆಗೋದು ಸರೀನಾ ಅಂದಾಗ ವಿಜಯ್ ಅಭಿಪ್ರಾಯ ಹೀಗಿತ್ತು.‘ವಿಲನ್ ಅಂದರೆ ಸಾಮಾನ್ಯವಾಗಿ ಮೂಡುವ ನೆಗೆಟೀವ್ ಶೇಡ್ ಈ ಪಾತ್ರದಲ್ಲಿ ಕಡಿಮೆ ಇದೆ. ಬಹಳ ಭಿನ್ನವಾಗಿ ಪಾತ್ರ ಸೃಷ್ಟಿಸಿರುವುದರಿಂದ ಒಪ್ಪಿಕೊಂಡಿದ್ದೇನೆ. ಇಡೀ ಚಿತ್ರದಲ್ಲಿ ಪಾತ್ರ ಸಂಚಾರವಿರುತ್ತದೆ. ಈ ಪಾತ್ರಕ್ಕೆ ಈಗಾಗಲೇ ತಯಾರಿ ನಡೆಸಿದ್ದೇನೆ’ ಎನ್ನುತ್ತಾರೆ.
ವಿಜಯ್ ಗೆ ತೆಲುಗಿನಲ್ಲಿ ಇದು ಒಳ್ಳೆಯ ಅವಕಾಶದಂತೆ ಒಳ್ಳೆಯ ಸಂಭಾವನೆ ಕೂಡ ಇದೆ ಅನ್ನೋ ಮಾತು ಇದೆ. ಒಂದು ಮೂಲದ ಪ್ರಕಾರ, ವಿಜಯ್ ಬಾಲಯ್ಯರ ಚಿತ್ರದಲ್ಲಿ ನಟಿಸುವುದಕ್ಕೆ ಸುಮಾರು 8ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಏನೇ ಆಗಲಿ, ರಮೇಶ್, ಸುದೀಪ್, ಡಾಲಿ ಧನಂಜಯ್ ಅವರಂತೆ ವಿಜಯ್ ಕೂಡ ಪರಭಾಷೆ ದುನಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Puneet Raj Kumar : ದೇಶದ ಗಡಿ ದಾಟಿದ ರಾಜಕುಮಾರ : ಶ್ರೀಲಂಕಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಿಕ್ತು ವಿಶೇಷ ಗೌರವ

(Duniya Vijay revealed Why I am acting in Telugu Film)

Comments are closed.